Full Kannada Grammar
Full Kannada Grammar
ನಾಮಪದಗಳು
ನಾಮಪದಗಳು: ಒಂದು ವಸ್ತು, ಒಬ್ಬ ವ್ಯಕ್ತಿ, ಒಂದು ಸ್ಥಳದ ಹೆಸರಾಗಿರಬಹುದು ಅಥವಾ ಒಂದು ಗುಂಪನ್ನು ಸೂಚಿಸುವ ಪದವಾಗಿರಬಹುದು ಅಥವಾ ಗುಣ, ಸ್ವಭಾವ, ಸಂಖ್ಯೆ, ಸ್ಥಾನ, ಅಳತೆ, ತೂಕ ಇತ್ಯಾದಿಗಳನ್ನು ಸೂಚಿಸುವ ಪದಗಳಾಗಿರಬಹುದು. ಅವುಗಳನ್ನು ನಾಮಪದಗಳೆಂದು ಕರೆಯುತ್ತೇವೆ.
ನಾಮಪದದ ವಿಧಗಳು
1 ವಸ್ತುವಾಚಕ ಅಥವಾ ನಾಮವಾಚಕ,
2 ಗುಣವಾಚಕ,
3 ಸಂಖ್ಯಾವಾಚಕ,
4 ಸಂಖ್ಯೇಯವಾಚಕ,
5 ಭಾವನಾಮ,
6 ಪರಿಮಾಣ ವಾಚಕ,
7 ಪ್ರಕಾರವಾಚಕ
8 ದಿಗ್ವಾಚಕ,
9 ಸರ್ವನಾಮ
ಎಂಬುದಾಗಿ ಅನೇಕ ಗುಂಪುಗಳಾಗಿ ವಿಂಗಡಿಸಬಹುದು.
1. ವಸ್ತುವಾಚಕ ಅಥವಾ ನಾಮವಾಚಕ
ಯಾವುದೇ ವಸ್ತು, ವ್ಯಕ್ತಿ, ಪ್ರಾಣಿ ಹಾಗೂ ಸ್ಥಳಗಳಿಗೆ ಇರುವ ಹೆಸರುಗಳನ್ನು ವಸ್ತುವಾಚಕಗಳೆನ್ನುವರು. ವಸ್ತುವಾಚಕನಾಮಪದವನ್ನು ಚೇತನ (ಚೇತನವುಳ್ಳ), ಅಚೇತನ (ಚೇತನವಿಲ್ಲದ್ದು) ಎಂದು ವಿಭಾಗಿಸಲಾಗಿದೆ.
ಉದಾ : ಮನುಷ್ಯ, ಪ್ರಾಣಿ, ಪಕ್ಷಿ ಇವು ಚೇತನವುಳ್ಳವು.
ನೆಲ, ಜಲ, ಹಣ್ಣು, ಕಾಯಿ, ಮನೆ, ಬೆಟ್ಟ ಇವು ಚೇತನವಿಲ್ಲದವು.
ವಸ್ತುವಾಚಕ ನಾಮಪದದಲ್ಲಿ ಮುಖ್ಯವಾಗಿ ಮೂರು ವಿಧಗಳು. ಅವುಗಳೆಂದರೆ,
1) ರೂಢನಾಮ
2) ಅಂಕಿತನಾಮ
3) ಅನ್ವರ್ಥನಾಮ
1. ರೂಢನಾಮ
:- ರೂಢಿಯಿಂದ ಬಂದ ಸಾಮಾನ್ಯ ವಾಚಕಗಳನ್ನು ಅಥವಾ ಹೆಸರುಗಳನ್ನು ರೂಢನಾಮ ಎನ್ನುವರು.
ಉದಾ:- ಹಳ್ಳಿ, ಊರು, ನಗರ, ಪಟ್ಟಣ, ನದಿ, ಪರ್ವತ, ಬೆಟ್ಟ, ಕಾಡು, ಕೆರೆ, ಹಳ್ಳ, ಗಿಡ, ಎಲೆ, ಅಡಿಕೆ, ಬಳ್ಳಿ, ಬಂಡೆಗಲ್ಲು, ಹೊಳೆ, ಮರ, ಮನುಷ್ಯ, ದೇಶ, ಹುಡುಗಿ, ಹುಡುಗ, ಶಾಲೆ, ಮನೆ, ರಾಜ, ಹೆಂಗಸು, ಗಂಡಸು, ಮಕ್ಕಳು, ಹೆಣ್ಣು, ಜನರು, ಮುದುಕ, ಮುದುಕಿ, ಹಸು, ಎಮ್ಮೆ -ಮುಂತಾದವು.
2.ಅಂಕಿತನಾಮ
:- ವ್ಯವಹಾರದ ಉಪಯೋಗಕ್ಕಾಗಿ ಇಟ್ಟುಕೊಂಡ ಹೆಸರುಗಳೆಲ್ಲ ಅಂಕಿತನಾಮಗಳು.
ಉದಾ:- ಬ್ರಹ್ಮಪುತ್ರ, ಬೆಂಗಳೂರು, ಕಾವೇರಿ, ಹಿಮಾಲಯ, ಮನೀಶ್, ಬೇವು ಮುಂತಾದವು ಜೋಸೆಫ್, ಬೋರಣ್ಣ ಮುಂತಾದವು.
3. ಅನ್ವರ್ಥನಾಮ
:- ರೂಪ, ಗುಣ, ಸ್ವಭಾವ, ವಿಶೇಷವಾದ ಅರ್ಥಕ್ಕೆ ಅನುಸಾರವಾಗಿ ನೀಡುವ ಹೆಸರುಗಳೆಲ್ಲ ಅನ್ವರ್ಥನಾಮಗಳು
ಉದಾ:- ಕವಿ, ಮೂಗ, ನೀತಿಜ್ಞ, ಕುಂಟ, ಹೆಳವ, ಗಿಡ್ಡ, ಬೆಪ್ಪ, ಕ್ರೂರಿ, ಪೆದ್ದ, ಬುದ್ಧಿವಂತ, ಧೀರ, ಹೇಡಿ, ಸಾಧು, ಜಿಪುಣ, ಅಷ್ಟಾವಕ್ರ, ಶಿಕ್ಷಕ, ವ್ಯಾಪಾರಿ, ಯೋಗಿ, ರೋಗಿ, ಸನ್ಯಾಸಿ, ವೈದ್ಯ, ಶಿಕ್ಷಕಿ, ಪಂಡಿತ, ಮೂಕ, ವಿದ್ವಾಂಸ, ಪೂಜಾರಿ, ಕುರುಡ, ಜಾಣ, ಕಿವುಡ, ದಡ್ಡ, ವಿಜ್ಞಾನಿ, ದಾನಿ, ಅಭಿಮಾನಿ ಮುಂತಾದವು.
2. ಗುಣವಾಚಕ
ವಸ್ತುಗಳ ಗುಣ, ರೀತಿ, ಸ್ವಭಾವಗಳನ್ನು ಹೇಳುವ ವಿಶೇಷಣಗಳೇ ಗುಣವಾಚಕಗಳು. ವಿಶೇಷಣಗಳನ್ನು ಯಾವುದಕ್ಕೆ ಹೇಳಲಾಗುತ್ತದೋ ಅಂಥ ಶಬ್ದಗಳನ್ನು ವಿಶೇಷ್ಯಗಳು ಎನ್ನುತ್ತಾರೆ.
ವಿಶೇಷಣ ವಿಶೇಷ್ಯ
ಸಿಹಿ ಹಣ್ಣು
ದೊಡ್ಡ ನದಿ
ಒಳ್ಳೆಯ ಹುಡುಗಿ
ಕೆಟ್ಟ ಮನುಷ್ಯ
ದೊಡ್ಡದು ಮರ
ಹಳತು ಸಿರೆ
ಉದಾ:- ಕೆಂಪು, ದೊಡ್ಡ, ಚಿಕ್ಕ, ಹಳೆಯ, ಕರಿಯ, ಕಿರಿಯ, ಒಳ್ಳೆಯ, ಕೆಟ್ಟ, ಹೊಸದು, ದೊಡ್ಡದು ಇತ್ಯಾದಿ ಪದಗಳು.
3. ಸಂಖ್ಯಾವಾಚಕ
ಸಂಖ್ಯೆಯನ್ನು ಸೂಚಿಸುವ ಪದಗಳೇ ಸಂಖ್ಯಾವಾಚಕಗಳು.
ಉದಾ : ಒಂದು, ಎರಡು, ಹತ್ತು, ನೂರೈದು, ಸಾವಿರ, ಲಕ್ಷ, ಕೋಟಿ ಇತ್ಯಾದಿ.
4. ಸಂಖ್ಯೇಯವಾಚಕ
ಸಂಖ್ಯೆಯಿಂದ ಕೂಡಿದ ಶಬ್ದಗಳೆಲ್ಲವೂ ಸಂಖ್ಯೇಯವಾಚಕಗಳು.
ಸಂಖ್ಯಾವಾಚಕ ಸಂಖ್ಯೇಯವಾಚಕ
ಒಂದು ಒಬ್ಬ, ಒಬ್ಬಳು
ಎರಡು ಇಬ್ಬರು, ಎರಡನೆಯ, ಇಮ್ಮಡಿ
ಮೂರು ಮೂವರು, ಮೂರನೆಯ, ಮೂರರಿಂದ
ನಾಲ್ಕು ನಾಲ್ವರು, ನಾಲ್ಕನೆಯ, ನಾಲ್ವರಿಂದ
ಐದು ಐವರು, ಪಂಚಾಮೃತ
ಹೀಗೆ-ಸಂಖ್ಯೆಯಿಂದ ಕೂಡಿರುವ ವಸ್ತುಗಳನ್ನು ಹೇಳುವ ಪದಗಳೆಲ್ಲ ಸಂಖ್ಯೇಯ ವಾಚಕಗಳು (ಎರಡನೆಯ, ನಾಲ್ಕನೆಯ, ಹತ್ತನೆಯ ಇತ್ಯಾದಿ) ಇವುಗಳನ್ನು ಇತ್ತೀಚೆಗೆ ಎರಡನೇ, ನಾಲ್ಕನೇ, ಹತ್ತನೇ ಎಂದೂ ಸಹಾ ಕೆಲವರು ಬಳಸುತ್ತಿದ್ದಾರೆ.
5. ಭಾವನಾಮ
ವಸ್ತು ಮತ್ತು ಕ್ರಿಯೆಗಳ ಭಾವವನ್ನು ತಿಳಿಸುವ/ಸೂಚಿಸುವ ಪದಗಳೇ ಭಾವನಾಮಗಳು.
ಓಹೋ, ಅಯ್ಯೋ, ಅಬ್ಬಬ್ಬ
ಉದಾ : ಕೆಚ್ಚನೆಯದರ ಭಾವ – ಕೆಂಪು
ಬಿಳಿದರ ಭಾವ – ಬಿಳುಪು
ಹಿರಿದರ ಭಾವ – ಹಿರಿಮೆ
ನೋಡುವುದರ ಭಾವ- ನೋಟ
ಆಡುವುದರ ಭಾವ – ಆಟ
ಮಾಡುವುದರ ಭಾವ = ಮಾಟ
6. ಪರಿಮಾಣವಾಚಕ
ವಸ್ತುಗಳ ಸಾಮಾನ್ಯ ಅಳತೆ, ಪರಮಾಣ, ಗಾತ್ರ-ತ್ಯಾದಿಗಳನ್ನು ಹೇಳುವ ಶಬ್ದಗಳನ್ನು ಪರಿಮಾಣವಾಚಕಳೆನ್ನುವರು.
ಉದಾ:
`ಅಷ್ಟು, ಇಷ್ಟು, ಹಲವು, ಕೆಲವು, ಅನಿತು
`ಅಷ್ಟು ದೊಡ್ಡ ಮರವನ್ನು ಹೇಗೆ ಕಡಿದರು?’
`ಇಷ್ಟು ಜನರು ಇಲ್ಲಿ ಸೇರಿ ಏನು ಮಾಡುತ್ತಾರೆ?’
`ತರಗತಿಯಲ್ಲಿ ಎಷ್ಟು ವಿದ್ಯಾರ್ಥಿಗಳಿದ್ದಾರೆ?’
– ಈ ವಾಕ್ಯಗಳಲ್ಲಿ `ಅಷ್ಟು’ `ಇಷ್ಟು’, `ಎಷ್ಟು’ ಎಂಬ ಪದಗಳಿವೆ. ಈ ಪದಗಳು ನಿರ್ದಿಷ್ಟ ಅಳತೆ, ಸಂಖ್ಯೆಗಳನ್ನು ಹೇಳುವುದಿಲ್ಲ. ಕೇವಲ ಪರಿಮಾಣ ಅಥವಾ ಗಾತ್ರವನ್ನು ಸೂಚಿಸುತ್ತವೆ. ಹೀಗೆ – ವಸ್ತುವಿನ ಪರಿಮಾಣ, ಗಾತ್ರವನ್ನು ಹೇಳುವ `ಅಷ್ಟು’, `ಇಷ್ಟು’, `ಹಲವು’, `ಕೆಲವು’, `ಎನಿತು’, `ಅನಿತು’ ಆಸು, ಈಸು, ಏಸು ಮುಂತಾದ ಪದಗಳೇ `ಪರಿಮಾಣವಾಚಕ’ಗಳು.
ಪರಿಮಾಣ :
ಹಲವು, ಕೆಲವು. (ಹಲವು ನದಿಗಳು, ಕೆಲವು ಹಣ್ಣುಗಳು)
ಗಾತ್ರ – ಅಷ್ಟು, ಇಷ್ಟು (ಗುಡ್ಡದಷ್ಟು, ಆನೆಯಷ್ಟು)
ಅಳತೆ – ಅಷ್ಟು, ಇಷ್ಟು (ಅಷ್ಟು ದೂರ, ಇಷ್ಟು ಪುಸ್ತಕಗಳು) – ಇತ್ಯಾದಿ.
ಹಲವು, ಅನಿತು, ಇತಿತು
7. ಪ್ರಕಾರವಾಚಕಗಳು
ವಸ್ತುಗಳ ಸ್ಥಿತಿ ಅಥವಾ ರೀತಿಗಳನ್ನು ತಿಳಿಸುವ ಶಬ್ದಗಳೆಲ್ಲ ಪ್ರಕಾರವಾಚಕಗಳೆನಿಸುವುವು. ಇವೂ ಒಂದು ಬಗೆಯ ಗುಣವಾಚಕಗಳೇ ಅಹುದು.
ಉದಾ:- ಅಂಥ, ಅಂಥಹುದು, ಇಂಥ, ಇಂಥದು, ಇಂಥಹುದು, ಎಂತಹ, ಎಂಥ, ಇಂಥದು, ಅಂತಹುದು, ಇಂತಹುದು, ಅಂಥವನು, ಅಂಥವಳು, ಅಂಥದು, ಅಂತಹವನು, ಇಂತಹವನು
8. ದಿಗ್ವಾಚಕ
ದಿಕ್ಕುಗಳನ್ನು ಸೂಚಿಸುವ ಪದಗಳೇ ದಿಗ್ವಾಚಕಗಳು.
ಉದಾ:- ಮೂಡಣ, ಪಡುವಣ, ತೆಂಕಣ, ಬಡಗಣ, ಮೂಡಲು, ಪಡುವಲು, ತೆಂಕಲು, ಬಡಗಲು, ಪೂರ್ವ, ಪಶ್ಚಿಮ, ದಕ್ಷಿಣ, ಉತ್ತರ, ಆಗ್ನೇಯ, ನೈರುತ್ಯ, ವಾಯುವ್ಯ, ಈಶಾನ್ಯ, ಆಚೆ, ಈಚೆ ಇತ್ಯಾದಿ.
9. ಸರ್ವನಾಮ
ನಾಮಪದಗಳ ಸ್ಥಾನದಲ್ಲಿ ನಿಂತು, ಅವನ್ನು ಸೂಚಿಸುವ ಶಬ್ದಗಳು ಸರ್ವನಾಮಗಳು ಎನಿಸುವುವು
ಉದಾ:- ಅವನು, ಅವಳು, ಅದು, ಅವು, ನೀನು, ನೀವು, ನಾನು, ಯಾವನು, ಇದು, ಏನು ಇತ್ಯಾದಿ.
ರಾಮ ಅಜ್ಜನ ಮನೆಗೆ ಹೊರಟನು. ಅವನ ತಮ್ಮ ನೀರಜ`ನಾನೂ ಬರುತ್ತೇನೆ’ ಎಂದನು. ತಂಗಿ ರಾಜೀವಿ `ತಾನೂ ಬರುವೆನೆಂದಳು’. ಆಗ ರಾಮ`ನೀವು ಇಬ್ಬರೂ ಆದಷ್ಟು ಬೇಗ ತಯಾರಾಗಿರಿ’ ಎಂದನು. ಇಲ್ಲಿ ಅವನ, ನಾನೂ, ತಾನೂ, ನೀವು ಎಂಬ
ಪದಗಳು ಬೇರೆ ಬೇರೆ ನಾಮಪದಗಳ ಬದಲಿಗೆ ಪ್ರಯೋಗಿಸಲ್ಪಟ್ಟವು. ಹೀಗೆ -ನಾಮಪದಗಳ ಸ್ಥಾನದಲ್ಲಿ ಬಂದು ಅವುಗಳ ಕಾರ‍್ಯವನ್ನು ನಿರ್ವಹಿಸುವ ಪದಗಳೇ ಸರ್ವನಾಮಗಳು. ಈ ಸರ್ವನಾಮಗಳನ್ನು
1) ಪುರುಷಾರ್ಥಕ
2) ಪ್ರಶ್ನಾರ್ಥಕ
3) ಆತ್ಮಾರ್ಥಕ ಸರ್ವನಾಮ ಗಳೆಂದು ಮೂರು ವಿಧಗಳಾಗಿ ವಿಂಗಡಿಸಲಾಗಿದೆ.
1.ಪುರುಷಾರ್ಥಕ ಸರ್ವನಾಮ
: ಇದನ್ನು ಮತ್ತೆ ಮೂರು ವಿಭಾಗ ಮಾಡಿದೆ.
– ಉತ್ತಮ ಪುರುಷ : ನಾನು ನಾವು
– ಮಧ್ಯಮ ಪುರುಷ : ನೀನು ನೀವ
– ಪ್ರಥಮ ಪುರುಷ/ಅನ್ಯ ಪರುಷ : ಅವನು – ಇವನು ಅವಳು – ಇವಳು
ಅವರು – ಇವರು ಅದು – ಅವು ಇದು – ಇವು
(ಇತ್ತೀಚೆಗೆ ಇವುಗಳನ್ನು ಪ್ರಥಮ, ದ್ವಿತೀಯ, ತೃತೀಯ ಪುರುಷಗಳೆಂದು ಹೇಳುವ ವಾಡಿಕೆ ಆರಂಭವಾಗಿದೆ.)
2. ಆತ್ಮಾರ್ಥಕ ಸರ್ವನಾಮ
: ಮಾತನಾಡುವವನು ತನ್ನನ್ನು ಹಾಗೂ ಇತರರನ್ನು ಗೌರವ ಸೂಚಕವಾಗಿ ಆತ್ಮಪ್ರಶಂಸೆಯಿಂದ ಬಳಸುವ ಸರ್ವನಾಮಗಳನ್ನು ‘ಆತ್ಮಾರ್ಥಕ ಸರ್ವನಾಮ’
ಎನ್ನುತ್ತಾರೆ. ಇವು ಸಾಮಾನ್ಯವಾಗಿ ಪ್ರಥಮ ಹಾಗೂ ಮಧ್ಯಮ ಪುರುಷದ ಅರ್ಥವನ್ನೇ ನೀಡುತ್ತವೆ.
ಉದಾ : ತಾನು, ತಾವು, ತನ್ನ, ತಮ್ಮ.
3. ಪ್ರಶ್ನಾರ್ಥಕ ಸರ್ವನಾಮ
: ಪ್ರಶ್ನೆಯಿಂದ ಕೂಡಿದ ಎಲ್ಲ ಸರ್ವನಾಮಗಳನ್ನು ಪ್ರಶ್ನಾರ್ಥಕ ಸರ್ವನಾಮ ಎನ್ನಲಾಗುತ್ತದೆ.
ಉದಾ:- ಯಾವುವು? ಏಕೆ? ಏನು? ಯಾವುದು? ಯಾರು? ಏತರದು? ಆವುದು?
==================================================
ವಿಭಕ್ತಿ ಪ್ರತ್ಯಯ
‘ರಾಮನು ತನ್ನ ಬಲಗಾಲಿನಿಂದ ಚೆಂಡನ್ನು ಒದೆದನು’ ಈ ವಾಕ್ಯವು – ರಾಮ, ತಾನು, ಬಲಗಾಲು, ಚೆಂಡು – ಹೀಗೆ ಕೇವಲ ನಾಮಪ್ರಕೃತಿಗಳನ್ನೇ ಹೇಳಿ ಒದೆದನು ಎಂದಿದ್ದರೆ ಅರ್ಥವಾಗುತ್ತಿರಲಿಲ್ಲ. ‘ರಾಮ, ತಾನು, ಬಲಗಾಲು, ಚೆಂಡು’ ಈ ನಾಲ್ಕು ಪ್ರಕೃತಿಗಳಿಗೆ ಪರಸ್ಪರ ವಾಕ್ಯದಲ್ಲಿ ಒಂದು ಸಂಬಂಧವಿದೆ. ಈ ಸಂಬಂಧವನ್ನು ವಿಭಕ್ತಿ ಪ್ರತ್ಯಯಗಳು ಉಂಟುಮಾಡುತ್ತವೆ. ಈ ರೀತಿ ನಾಮಪ್ರಕೃತಿಗೆ ಸೇರುವ ಪ್ರತ್ಯಯಗಳನ್ನು ‘ವಿಭಕ್ತಿ ಪ್ರತ್ಯಯಗಳು’ ಎನ್ನುತ್ತಾರೆ.
– ವಿಭಕ್ತಿ ಪ್ರತ್ಯಯ
– ವಿಭಕ್ತಿ ಪ್ರತ್ಯಯ ಎಂದರೇನು?
– ವಿಭಕ್ತಿ ಪ್ರತ್ಯಯದ 7 ಪ್ರಕಾರಗಳು:
– ಮುಖ್ಯವಾದ ಅಂಶಗಳು
– ವಿಭಕ್ತಿ ಪಲ್ಲಟ :
(ನಾಮಪ್ರಕೃತಿ + ವಿಭಕ್ತಿ ಪ್ರತ್ಯಯ = ನಾಮಪದ)
ವಿಭಕ್ತಿ ಪ್ರತ್ಯಯ ಎಂದರೇನು?
ಸ್ವತಂತ್ರವಾದ ಅರ್ಥವಿಲ್ಲದೆ ನಾಮಪ್ರಕೃತಿಗಳ ಮುಂದೆ ಸೇರಿ ಬೇರೆ-ಬೇರೆ ಅರ್ಥವನ್ನುಂಟು ಮಾಡುವ ‘ಉ’, ‘ಅನ್ನು’, ‘ಇಂದ’, ‘ಗೆ’, ‘ಕ್ಕೆ’, ‘ದೆಸೆಯಿಂದ’, ‘ಅ’, ‘ಅಲ್ಲಿ’ ಗಳಿಗೆ ʼವಿಭಕ್ತಿ ಪ್ರತ್ಯಯʼ ಗಳೆನ್ನುವರು.
ವಿಭಕ್ತಿ ಪ್ರತ್ಯಯದ ವಿಧಗಳು
1 ಪ್ರಥಮಾ
2 ದ್ವಿತೀಯಾ
3 ತೃತೀಯಾ
4 ಚತುರ್ಥೀ
5 ಪಂಚಮೀ
6 ಷಷ್ಠೀ
7 ಸಪ್ತಮೀ ಎಂಬುದಾಗಿ 7 ಗುಂಪುಗಳಾಗಿ ವಿಂಗಡಿಸಬಹುದು.
ವಿಭಕ್ತಿ ಪ್ರತ್ಯಯದ 7 ಪ್ರಕಾರಗಳು
ಕ್ರಿಯಾಪದದೊಂದಿಗೆ ನಾಮಪದದ ಸಂಬಂಧವನ್ನು ತಿಳಿಸುವ ಕರ್ತೃ, ಕರ್ಮ, ಕರಣ ಮುಂತಾದುವು ಕಾರಕಾರ್ಥಗಳು. ಕಾರಕಾರ್ಥವನ್ನು ವಿಭಜಿಸಿ ಹೇಳುವ ಪ್ರತ್ಯಯಗಳೇ ವಿಭಕ್ತಿಪ್ರತ್ಯಯ ಗಳು. ವಿಭಕ್ತಿಗಳಲ್ಲಿ ಏಳು ವಿಧಗಳಿವೆ.
ಮುಖ್ಯವಾದ ಅಂಶಗಳು
– ವಿಭಕ್ತಿ ಪ್ರತ್ಯಯಗಳಿಗೆ ಸ್ವತಂತ್ರವಾದ ಅರ್ಥ ಇರುವುದಿಲ್ಲ.
– ನಾಮಪ್ರಕೃತಿಗಳಿಗೆ ಸ್ವತಂತ್ರವಾದ ಅರ್ಥವಿದ್ದರು ವಾಕ್ಯದ ಅರ್ಥವನ್ನು ಪೂರ್ಣಗೊಳಿಸಲು ವಿಭಕ್ತಿ ಪ್ರತ್ಯಯಗಳನ್ನು ನಾಮಪ್ರಕೃತಿಗೆ ಸೇರಿಸಬೇಕು.
– ವಿಭಕ್ತಿಗಳು ಏಳು ಇದ್ದರೂ ಕಾರಕ ಆರು ಮಾತ್ರ. ಷಪ್ಠೀ ವಿಭಕ್ತಿ ಪ್ರತ್ಯಯ ‘ಅ’ ಎಂಬುದು ಕ್ರಿಯೆಗೆ ನೇರವಾಗಿ ಸಂಬಂಧಪಡದಿರುವುದರಿಂದ ಅದನ್ನು ಕಾರಕ ಎಂದು ಕರೆಯಲಾಗುವುದಿಲ್ಲ. ‘ರಾಜನ’ ಎಂಬ ಷಷ್ಠೀ ವಿಭಕ್ತಿಯಿಂದ ಕೂಡಿದ ಪದದ ಮುಂದೆ ನೇರವಾಗಿ ಕ್ರಿಯಾಪದವನ್ನು ಇರಿಸಲು ಸಾಧ್ಯವಿಲ್ಲ.
– ವಿಭಕ್ತಿ ಪ್ರತ್ಯಯಗಳಿಗೆ ಸ್ವತಂತ್ರವಾದ ಅರ್ಥವಿಲ್ಲದೆ ಇದ್ದರು ನಾಮಪ್ರಕೃತಿಗಳ ಮುಂದೆ ಸೇರಿಸಿ ಬೇರೆ-ಬೇರೆ ಅರ್ಥವನ್ನುಂಟುಮಾಡುತ್ತವೆ. ಉದಾ:
ಪರಶುರಾಮನು ಮನೆ ಬಂದನು.
(ವಾಕ್ಯದ ಅರ್ಥವು ಸ್ಪಷ್ಟವಾಗಿಲ್ಲ/ ನಮಗೆ ಸರಿಯಾಗಿ ಅರ್ಥವಾಗುವುದಿಲ್ಲ)
– ಪರಶುರಾಮ ಮನೆಗೆ ಬಂದನು. (ಮನೆ+ಗೆ)
– ಪರಶುರಾಮನು ಮನೆಯಿಂದ ಬಂದನು. (ಮನೆ+ಇಂದ)
– ಹಳೆಗನ್ನಡ ವಿಭಕ್ತಿ ಪ್ರತ್ಯಯ ಕುರಿತು ಭಟ್ಟಾಕಳಂಕನ ಸೂತ್ರ: ಮಮಿಂಗೆತ್ತಣಿಮದೊಳ್
– ವಿಭಕ್ತಿ ಪ್ರತ್ಯಯಗಳನ್ನು ಏಕವಚನ ಮತ್ತು ಬಹುವಚನಗಳೆರಡರಲ್ಲೂ ಪ್ರಯೋಗಿಸಲ್ಪಡುತ್ತವೆ
ವಿಭಕ್ತಿಗಳು ಏಳು ಇದ್ದರೂ ಕಾರಕ ಆರು ಮಾತ್ರ. ಷಪ್ಠೀ ವಿಭಕ್ತಿ ಪ್ರತ್ಯಯ ‘ಅ’ ಎಂಬುದು ಕ್ರಿಯೆಗೆ ನೇರವಾಗಿ ಸಂಬಂಧಪಡದಿರುವುದರಿಂದ ಅದನ್ನು ಕಾರಕ ಎಂದು ಕರೆಯಲಾಗುವುದಿಲ್ಲ. ‘ರಾಜನ’ ಎಂಬ ಷಷ್ಠೀ ವಿಭಕ್ತಿಯಿಂದ ಕೂಡಿದ ಪದದ ಮುಂದೆ ನೇರವಾಗಿ ಕ್ರಿಯಾಪದವನ್ನು ಇರಿಸಲು ಸಾಧ್ಯವಿಲ್ಲ.
ವಿಭಕ್ತಿ ಪಲ್ಲಟ
ನಾವು ಮಾತನಾಡುವಾಗ ಪ್ರಕೃತಿಗಳಿಗೆ ಯಾವ ವಿಭಕ್ತಿ ಪ್ರತ್ಯಯವನ್ನು ಬಳಸಬೇಕೋ ಅದನ್ನು ಬಳಸದೆ ಬೇರೆ ವಿಭಕ್ತಿ ಪ್ರತ್ಯಯವನ್ನು ಬಳಸಿ ಮಾತಾನಾಡುವುದುಂಟು. ಹೀಗೆ ಒಂದು ವಿಭಕ್ತಿ ಪ್ರತ್ಯಯದ ಬದಲಿಗೆ ಅರ್ಥ ವ್ಯತ್ಯಾಸವಾಗದಂತೆ ಇನ್ನೊಂದು ವಿಭಕ್ತಿ ಪ್ರತ್ಯಯವನ್ನು ಬಳಸುವ ಕ್ರಮಕ್ಕೆ ‘ವಿಭಕ್ತಿ ಪಲ್ಲಟ’ ಎಂದು ಹೇಳುತ್ತೇವೆ.
ದ್ವಿತೀಯಾ ಬದಲಿಗೆ ಚತುರ್ಥೀ ವಿಭಕ್ತಿ ಸೇರಿದಾಗ –
– ಊರನ್ನು ಸೇರಿದನು (ದ್ವಿತೀಯಾ) ಊರಿಗೆ ಸೇರಿದನು (ಚತುರ್ಥೀ)
– ಬೆಟ್ಟವನ್ನು ಹತ್ತಿದನು (ದ್ವಿತೀಯಾ) ಬೆಟ್ಟಕ್ಕೆ ಹತ್ತಿದನು. (ಚತುರ್ಥೀ)
ಪಂಚಮೀ ಬದಲಿಗೆ ತೃತೀಯಾ ವಿಭಕ್ತಿ ಸೇರಿದಾಗ –
– ಮರದ ದೆಸೆಯಿಂದ ಹಣ್ಣು ಬಿತ್ತು (ಪಂಚಮೀ)
– ಮರದಿಂದ ಹಣ್ಣು ಬಿತ್ತು (ತೃತೀಯಾ)
– ಕೌರವನ ದೆಸೆಯಿಂದ ಕೇಡಾಯ್ತು (ಪಂಚಮೀ)
– ಕೌರವನಿಂದ ಕೇಡಾಯ್ತು (ತೃತೀಯಾ)
ಷಷ್ಠೀ ಬದಲಿಗೆ ಚತುರ್ಥೀ ವಿಭಕ್ತಿ ಸೇರಿದಾಗ –
– ನಮ್ಮ ಚಿಕ್ಕಪ್ಪ (ಷಷ್ಠೀ) ನಮಗೆ ಚಿಕ್ಕಪ್ಪ (ಚತುರ್ಥೀ)
– ಅಯೋಧ್ಯೆಯ ರಾಜ (ಷಷ್ಠೀ) ಅಯೋಧ್ಯೆಗೆ ರಾಜ (ಚತುರ್ಥೀ)
ಕೆಳಗಿನ ವಾಕ್ಯಗಳನ್ನು ಓದಿ ವ್ಯತ್ಯಾಸ ತಿಳಿಯಿರಿ.
ಅ) ಇರುವೆಯು ಬಂದಿತು. (ಇರುವೆ+ಉ=ಇರುವೆಯು)
ಆ) ಇರುವೆ ಬಂದಿತು.
ಮೇಲಿನ ವಾಕ್ಯಗಳಲ್ಲಿ ಎರಡೂ ವಾಕ್ಯಗಳೂ ಸರಿ. ಆದರೆ,
(ಅ) ಎಂಬ ವಾಕ್ಯದಲ್ಲಿರುವ ಯು ಎಂಬ ಅಕ್ಷರವನ್ನು ಸೇರಿಸಲಾಗಿದೆ.
(ಆ) ಎಂಬ ವಾಕ್ಯದಲ್ಲಿ ‘ಯು’ ಅನ್ನು ಬಿಡಲಾಗಿದೆ. (ಆ) ಎಂಬ ವಾಕ್ಯದಲ್ಲಿ ‘ಯು’
ಅನ್ನು ಬಿಟ್ಟರೂ ಅರ್ಥ ವ್ಯತ್ಯಾಸವಾಗುವುದಿಲ್ಲ ಎಂಬುದನ್ನು ಗಮನಿಸಿ.
(ಕ) ಇರುವೆ ಗೂಡನ್ನು ಬಂದಿತು. (ಗೂಡು + ಅನ್ನು =ಗೂಡನ್ನು)
(ಗ) ಇರುವೆ ಗೂಡಿನಿಂದ ಬಂದಿತು. (ಗೂಡು+ನ+ಇಂದ=ಗೂಡಿನಿಂದ)
(ಚ) ಇರುವೆ ಗೂಡಿಗೆ ಬಂದಿತು. (ಗೂಡು+ಇಗೆ=ಗೂಡಿಗೆ)
(ಜ) ಇರುವೆ ಗೂಡಿನಲ್ಲಿ ಬಂದಿತು. (ಗೂಡು+ನ+ಅಲ್ಲಿ=ಗೂಡಿನಲ್ಲಿ, ಇದನ್ನು ಗೂಡು+ಅಲ್ಲಿ=ಗೂಡಲ್ಲಿ ಎಂದೂ ಬಳಸಬಹುದು)
ಮೇಲಿನ ನಾಲ್ಕು ವಾಕ್ಯಗಳಲ್ಲಿ (ಕ) ಮತ್ತು (ಜ) ವಾಕ್ಯಗಳಲ್ಲಿ ಅರ್ಥ ಸ್ಪಷ್ಟವಾಗುವುದಿಲ್ಲ. ಇಂಥ ವಾಕ್ಯ ಸರಿಯಲ್ಲ. ಈ ವಾಕ್ಯವನ್ನು ಬದಲಾಯಿಸಿ ಬರೆಯೋಣ.
(ಕ) ಇರುವೆ ಗೂಡನ್ನು ನೋಡಿತು.
(ಚ) ಇರುವೆ ಗೂಡಿನಲ್ಲಿ (ಗೂಡಲ್ಲಿ) ಇದೆ.
ಈಗ ಈ ವಾಕ್ಯಗಳು ಅರ್ಥವತ್ತಾಗಿ ಕಾಣಿಸುತ್ತವೆ.
ಮೇಲಿನ ನಾಲ್ಕು ವಾಕ್ಯಗಳಲ್ಲಿ (ಗ) ಮತ್ತು (ಚ) ವಾಕ್ಯಗಳಲ್ಲಿ ಅರ್ಥ ಸ್ಪಷ್ಟವಾಗುತ್ತದೆ. ಆದರೆ ಈ ವಾಕ್ಯಗಳಲ್ಲಿ ಬಳಕೆಯಾಗಿರುವ ಗೆ ಮತ್ತು ಇಂದ ಇವುಗಳನ್ನು ಸೇರಿಸಿರುವುದರಿಂದ ಅರ್ಥ ವ್ಯತ್ಯಾಸವಾಗಿದೆ. ಇರುವೆ ಗೂಡಿನಿಂದ ಬಂದಿತು. (ಹೊರಗೆ ಬಂದಿತು) ಇರುವೆ ಗೂಡಿಗೆ ಬಂದಿತು. (ಒಳಗೆ ಬಂದಿತು) ಎಂಬ ಅರ್ಥವಾಗುತ್ತದೆ.
– ಕೊಟ್ಟೆ ಕಟ್ಟಲು ಕೊಂಬೆಗಳನ್ನು ಬಗ್ಗಿಸುತ್ತವೆ.
– ರಾಜು ಗಿಡವನ್ನು ನೆಟ್ಟನು.
– ಕೆಲಸಗಾರ ಇರುವೆಗಳು ರಾಣಿಗೆ ಆಹಾರ ತಿನ್ನಿಸುತ್ತವೆ.
– ಕಮಲ ಮನೆಗೆ ಹೋದಳು.
– ಚಗಳಿ ಇರುವೆಗಳು ಮರದಲ್ಲಿ ಕೊಟ್ಟೆ ಕಟ್ಟುತ್ತವೆ.
– ಪೂರ್ಣಿಮ ಪೇಟೆಯಲ್ಲಿ ಆಟಿಕೆ ಕೊಂಡಳು.
ಸಂಧಿಗಳು
ಈ ಅಧ್ಯಾಯದಲ್ಲಿ ಸಂಧಿ, ಸಂಧಿಯ ವಿಧಗಳನ್ನು ಈ ಕೆಳಗಿನ ಪರಿವಿಡಿಯಂತೆ ಉದಾಹರಣೆಯೊಂದಿಗೆ ಕಲಿಯೋಣ ಬನ್ನಿ.
– ಸಂಧಿಗಳು – ಸಂಧಿ ಎಂದರೇನು?
– ಕನ್ನಡ ಸಂಧಿಗಳು – (1) ಲೋಪಸಂಧಿ:
– (2) ಆಗಮಸಂಧಿ:
– (3) ಆದೇಶಸಂಧಿ:
– ಪ್ರಕೃತಿಭಾವ
– ಸಂಸ್ಕೃತ ಸಂಧಿಗಳು – (1) ಸವರ್ಣ ದೀರ್ಘ ಸಂಧಿಗಳು:
– (2) ಗುಣಸಂಧಿ:
– (3) ವೃದ್ಧಿಸಂಧಿ:
– (4) ಯಣ್ ಸಂಧಿ:
– (5) ಜಶ್ತ್ವಸಂಧಿ:
– (6) ಶ್ಚುತ್ವಸಂಧಿ:
– (7) ಷ್ಟುತ್ವ ಸಂಧಿ
– (8) ಛತ್ವ ಸಂಧಿ
– (9) ‘ಲ’ ಕಾರ ದ್ವಿತ್ವ ಸಂಧಿ
– (10) ಅನುನಾಸಿಕಸಂಧಿ:
ಸಂಧಿ ಎಂದರೇನು?
ಎರಡು ವರ್ಣಗಳು (ಅಕ್ಷರಗಳು) ಕಾಲವಿಳಂಬವಿಲ್ಲದಂತೆ ಅರ್ಥ ಕೆಡದಂತೆ ಸೇರುವುದೇ ಸಂಧಿ.
ಅ. ಸ್ವರದ ಮುಂದೆ ಸ್ವರ ಬಂದು ಹೀಗೆ ಸಂಧಿಯಾದರೆ ಸ್ವರಸಂಧಿ ಎನ್ನುತ್ತೇವೆ.
ಆ. ಸ್ವರದ ಮುಂದೆ ವ್ಯಂಜನ ಅಥವಾ ವ್ಯಂಜನದ ಮುಂದೆ ಸ್ವರ ಅಥವಾ ವ್ಯಂಜನದ ಮುಂದೆ ವ್ಯಂಜನ ಇದ್ದು ಸಂಧಿಯಾದರೆ ಅದು ವ್ಯಂಜನ ಸಂಧಿ ಎನ್ನುತ್ತೇವೆ.
ಇ. ಸಂಧಿಯಾಗುವಾಗ ಹಲಕೆಲವು ವ್ಯತ್ಯಾಸಗಳು ಆ ಸಂಧಿಸಿದ ಅಕ್ಷರಗಳಲ್ಲಿ ಉಂಟಾಗುವುತ್ತವೆ. ಈ ವ್ಯತ್ಯಾಸವನ್ನೇ ಸಂಧಿಕ್ರಿಯೆ/ಸಂಧಿಕಾರ್ಯಗಳು ಎನ್ನುತ್ತೇವೆ.
ಪದ ರಚನೆ ಆಗುವಾಗ ಎರಡು ಅಕ್ಷರಗಳು ಕಾಲವಿಳಂಬವಿಲ್ಲದೆ ಒಟ್ಟು ಸೇರುವುದೇ ಸಂಧಿ. ಈ ರೀತಿಯಲ್ಲಿ ಪದಗಳು ಒಟ್ಟು ಸೇರುವಾಗ ಮೂಲ ಪದಗಳ ಅರ್ಥಕ್ಕೆ ಯಾವ ಲೋಪವೂ ಬರಬಾರದು, ಅರ್ಥಕ್ಕೆ ಲೋಪ ಬರುವುದಾದಲ್ಲಿ ಸಂಧಿ ಮಾಡಬಾರದೆಂಬ ನಿಯಮವುಂಟು.
ಭಾಷೆಯ ಅನುಸಾರ ಈ ಸಂಧಿಗಳಲ್ಲಿ ‘ಕನ್ನಡ ಸಂಧಿ’ ಮತ್ತು ‘ಸಂಸ್ಕೃತ ಸಂಧಿ’ ಗಳೆಂದು ಎರಡು ವಿಧಗಳಿವೆ.
(I) ಕನ್ನಡ ಪದಗಳೇ ಸೇರಿ ಅಥವಾ ಕನ್ನಡ ಮತ್ತು ಸಂಸ್ಕೃತ ಪದಗಳು ಸೇರಿ ಸಂಧಿಯಾದರೆ ‘ಕನ್ನಡಸಂಧಿ’ ಎಂತಲೂ,
(II) ಕೇವಲ ಸಂಸ್ಕೃತ ಪದಗಳು ಸೇರಿ ಸಂಧಿಯಾದರೆ ‘ಸಂಸ್ಕೃತಸಂಧಿ’ ಎಂತಲೂ ಕರೆಯಲಾಗುತ್ತದೆ.
ಈಗ ಕನ್ನಡ ಸಂಧಿಯನ್ನು ನೋಡೋಣ.
ಕನ್ನಡ ಸಂಧಿಗಳು
ಕನ್ನಡ ಸಂಧಿಗಳನ್ನು ಅಕ್ಷರಗಳ ಆಧಾರದ ಮೇಲೆ ಪುನಃ ಎರಡು ಭಾಗಗಳಾಗಿ ವಿಂಗಡಿಸಬಹುದು.
1. ಸ್ವರ ಸಂಧಿಗಳು
(1) ಲೋಪಸಂಧಿ
(2) ಆಗಮಸಂಧಿ
2. ವ್ಯಂಜನ ಸಂಧಿಗಳು
(3) ಆದೇಶ ಸಂಧಿ
ಊರಲ್ಲಿ, ಮೊಟ್ಟೆಯಿಡು, ಬೆಟ್ಟದಾವರೆ ಮೊದಲಾದ ಪದಗಳನ್ನು ಊರು, ಅಲ್ಲಿ, ಮೊಟ್ಟೆ, ಇಡು, ಬೆಟ್ಟ, ತಾವರೆ ಎಂದು ಓದಬಹುದಾದರೂ ನಾವು ಮಾತನಾಡುವಾಗ ಸುಲಭವಾಗಲು ಈ ಪದಗಳನ್ನು ಕೂಡಿಸಿ ಊರಲ್ಲಿ, ಮೊಟ್ಟೆಯಿಡು, ಬೆಟ್ಟದಾವರೆ ಇತ್ಯಾದಿಯಾಗಿ ಓದುತ್ತೇವೆ.
ಹೀಗೆ ಪದಗಳನ್ನು ಎಡೆಬಿಡದೆ ಒಟ್ಟಿಗೆ ಕೂಡಿಸಿ ಓದುವುದಕ್ಕೆ ಅಥವಾ ಹೇಳುವುದಕ್ಕೆ ‘ಸಂಧಿ’ ಎಂದು ಹೆಸರು.
ಈ ಪದಗಳನ್ನು ಸೇರಿಸಿ ಹೇಳುವಾಗ ಆ ಪದಗಳಲ್ಲಿ ಇರುವ ಅಕ್ಷರಗಳಲ್ಲಿ ಒಂದು ಅಕ್ಷರ ಬಿಟ್ಟುಹೋಗಬಹುದು (ಉದಾಹರಣೆ ಗಮನಿಸಿ), ಇಲ್ಲವೇ ಇರುವ ಅಕ್ಷರಗಳ ಜೊತೆಗೆ ಒಂದು ಅಕ್ಷರ ಹೊಸದಾಗಿ ಸೇರಿಕೊಳ್ಳಬಹುದು ಅಥವಾ ಒಂದು ಅಕ್ಷರದ ಬದಲಿಗೆ ಮತ್ತೊಂದು ಅಕ್ಷರ ಬರಬಹುದು. ಹೀಗೆ ಸಂಧಿಯಾಗುವಾಗ ಅಕ್ಷರಗಳು ಲೋಪವಾಗುವುದು, ಅಕ್ಷರ ಬಂದು ಸೇರುವುದು ಅಥವಾ ಒಂದು ಅಕ್ಷರದ ಬದಲಿಗೆ ಮತ್ತೊಂದು ಅಕ್ಷರ ಬಂದು ಸೇರುವುದಕ್ಕೆ ‘ಸಂಧಿಕಾರ್ಯ’ ಎನ್ನುವರು.
(1) ಲೋಪಸಂಧಿ:
ಸಂಧಿಯಾಗುವಾಗ ಅಕ್ಷರ ಲೋಪವಾದರೆ ಅದನ್ನು ‘ಲೋಪಸಂಧಿ’ ಎನ್ನುವರು. ಉದಾ:
ಊರು+ಅಲ್ಲಿ – ಊರಲ್ಲಿ
ಊರು + ಊರು = ಊರುರು
ಬಲ್ಲೆನು + ಎಂದು = ಬಲ್ಲೆನೆಂದು
ಊರು + ಇಂದ = ಊರಿಂದ
ಮಾತು + ಇಲ್ಲ = ಮಾತಿಲ್ಲ
ಮಾತು + ಅಂತು = ಮಾತಂತು
ಬೇರೆ + ಒಬ್ಬ = ಬೇರೊಬ್ಬ
ನಿನಗೆ + ಅಲ್ಲದೆ = ನಿನಗಲ್ಲದೆ
ತುಪ್ಪಳದ + ಅಂತೆ = ತುಪ್ಪಳದಂತೆ ಅ ಕಾರ ಲೋಪ
ಅಲ್ಲಿ + ಇದ್ದೇನೆ = ಅಲ್ಲಿದ್ದೇನೆ ಇ ಕಾರ ಲೋಪ
ಇವನು + ಒಬ್ಬ = ಇವನೊಬ್ಬ ಉ ಕಾರ ಲೋಪ
ಬೆಳ್ಳಗೆ + ಆಗಿ = ಬೆಳ್ಳಗಾಗಿ ಎ ಕಾರ ಲೋಪ
ಬೇರೆ + ಒಬ್ಬ = ಬೇರೊಬ್ಬ (ಎ ಕಾರ ಲೋಪ)
ಮತ್ತು + ಒಬ್ಬ = ಮತ್ತೊಬ್ಬ (ಉ + ಒ = ಒ)
ಅಲ್ಲಿ + ಅಲ್ಲಿ = ಅಲ್ಲಲ್ಲಿ (ಇ ಕಾರ ಲೋಪ)
ಸಂಪನ್ನರು + ಆದ = ಸಂಪನ್ನರಾದ
ಇನ್ನೂ + ಒಂದು = ಇನ್ನೊಂದು (ಊ + ಒ = ಒ)
ಒಂದನ್ನೂ + ಒಂದು = ಒಂದನ್ನೊಂದು (ಊ + ಒ = ಒ)
ತನ್ನ + ಇಚ್ಛೆ = ತನ್ನಿಚ್ಛೆ (ಅ + ಇ = ಇ)
ಬಟ್ಟಲು + ಆಕಾರ = ಬಟ್ಟಲಾಕಾರ (ಉ + ಆ = ಆ)
ಒಂದು + ಎರಡು = ಒಂದೆರಡು (ಉ + ಎ = ಎ)
ನಾಲ್ಕು + ಐದು = ನಾಲ್ಕೈದು (ಉ + ಐ = ಐ)
ಮೇಲೆ + ಏರಿ = ಮೇಲೇರಿ (ಎ + ಏ = ಏ)
ಕೊಳು + ಊದಿ = ಕೊಳಲೂದಿ (ಉ + ಊ = ಊ)
(2) ಆಗಮಸಂಧಿ:
ಸಂಧಿಯಾಗುವಾಗ ಒಂದು ಅಕ್ಷರ ಹೊಸದಾಗಿ ಬಂದರೆ ಅದನ್ನು ʼಆಗಮ ಸಂಧಿʼ ಎನ್ನುವರು.
ಉದಾ: ಮೊಟ್ಟೆ+ಇಡು-ಮೊಟ್ಟೆಯಿಡು
ಕೈ + ಅನ್ನು = ಕೈಯನ್ನು
ಗುರು + ಅನ್ನು = ಗುರುವನ್ನು
ಹಸು + ಅನ್ನು = ಹಸುವನ್ನು
ಮರ + ಅನ್ನು = ಮರವನ್ನು
ಪುಸ್ತಕ + ಅನ್ನು = ಪುಸ್ತಕವನ್ನು
ಪಿತೃ + ಅನ್ನು = ಪಿತೃವನ್ನು
ಕೈ + ಅಲ್ಲಿ = ಕೈಯಲ್ಲಿ
ಚಳಿ + ಇಂದ = ಚಳಿಯಿಂದ
ಮನೆ + ಇಂದ = ಮನೆಯಿಂದ
ಮಳೆ + ಇಂದ = ಮಳೆಯಿಂದ
ಶಾಲೆ + ಇಂದ = ಶಾಲೆಯಿಂದ
ಶಾಲೆ + ಅಲ್ಲಿ = ಶಾಲೆಯಲ್ಲಿ
ಹಳ್ಳಿ + ಅಲ್ಲಿ = ಹಳ್ಳಿಯಲ್ಲಿ
ಭಾವನೆ + ಉಂಟಾಯಿತು = ಭಾವನೆಯುಂಟಾಯಿತು
ಸ್ವಾರಸ್ಯ + ಇಲ್ಲ = ಸ್ವಾರಸ್ಯವಿಲ್ಲ
ಮಗು + ಇಗೆ = ಮಗುವಿಗೆ
ಧೈರ್ಯ + ಆಗಿ = ಧೈರ್ಯವಾಗಿ
(3) ಆದೇಶಸಂಧಿ:
ಸಂಧಿಯಾಗುವಾಗ ಒಂದು ಅಕ್ಷರದ ಬದಲಿಗೆ ಮತ್ತೊಂದು ಅಕ್ಷರ ಬಂದರೆ ಅದನ್ನು ‘ಆದೇಶ ಸಂಧಿ’ ಎನ್ನುವರು. ಉದಾ: ಬೆಟ್ಟ + ತಾವರೆ = ಬೆಟ್ಟದಾವರೆ
ʼಕ ತ ಪʼ ಗಳಿಗೆ ʼಗ ದ ಬʼ ಗಳೂ ಕೆಲವೊಮ್ಮೆ ʼಪ ಬ ಮʼ ಗಳ ಬದಲಿಗೆ ʼವʼ ಕಾರವೂ ಆದೇಶವಾಗಿ ಬರುತ್ತವೆ.
ಉದಾ : ಹುಲ್ಲು + ಕಾವಲು > ಹುಲ್ಲುಗಾವಲು
ಬೆನ್ + ಪತ್ತು = ಬೆಂಬತ್ತು
ಮೈ + ತೊಳೆ = ಮೈದೊಳೆ
ಮೈ + ತೋರು = ಮೈದೋರು
ಕೆನೆ + ಪಾಲ್ = ಕೆನೆವಾಲ್
ಮಳೆ + ಕಾಲ = ಮಳೆಗಾಲ
ಬೆಟ್ಟ + ತಾವರೆ = ಬೆಟ್ಟದಾವರೆ
ಹೂ + ಪುಟ್ಟಿ = ಹೂಬುಟ್ಟಿ
ತುದಿ + ಕಾಲಲ್ಲಿ = ತುದಿಗಾಲಲ್ಲಿ
ಹುಲಿ + ತೊಗಲು = ಹುಲಿದೊಗಲು
ಕಣ್ + ಪನಿ = ಕಂಬನಿ
ನೀರ್ + ಪನಿ = ನೀರ್ವನಿ
ಕಡು + ಬೆಳ್ಪು = ಕಡುವೆಳ್ಪು
ಮೆಲ್ + ಮಾತು = ಮೆಲ್ವಾತು
ತಲೆ + ಕೂದಲು = ತಲೆಗೂದಲು
ಕೆಳ + ತುಟಿ = ಕೆಳದುಟಿ
ಆಶ್ರಯ + ತಾಣ = ಆಶ್ರಯದಾಣ
ಪ್ರಕೃತಿಭಾವ
ಆ + ಆಡು ಅಯ್ಯೋ + ಇದೇನು
ಓಹೋ + ಅಜ್ಜಿ ಬಂದರೇ ಅಕ್ಕಾ + ಇತ್ತಬಾ
ಕೊಟ್ಟಿರುವ ಉದಾಹರಣೆಗಳನ್ನು ಗಮನಿಸಿದಾಗ ಸ್ವರದ ಮುಂದೆ ಸ್ವರ ಬಂದಿರುವುದರಿಂದ ಲೋಪ ಅಥವಾ ಆಗಮ ಸಂಧಿ ಆಗಬೇಕಿತ್ತು. ಹಾಗೆ ಸಂಧಿ ಮಾಡಿದರೆ ಅರ್ಥ ಕೆಡುತ್ತದೆ. ಹಾಗಾಗಿ ಸಂಧಿ ಮಾಡುವುದಿಲ್ಲ. ಪ್ಲುತ ಸ್ವರದ ಮುಂದೆ ಸ್ವರ ಬಂದಾಗ; ಅಯ್ಯೋ, ಆಹಾ, ಓಹೋ ಮುಂತಾದ ಭಾವಸೂಚಕ ಅವ್ಯಯಗಳ ಮುಂದೆ ಸ್ವರ ಬಂದಾಗ ಹಾಗೂ ಆ ಎಂಬ ಪದದ ಮುಂದೆ (ಅಕ್ಷರದ ಮುಂದೆ ಅಲ್ಲ) ಸ್ವರ ಬಂದಾಗ ಸಂಧಿ ಮಾಡಬಾರದು. ಹೀಗೆ – ಸ್ವರದ
ಮುಂದೆ ಸ್ವರ ಬಂದರೂ ಸಂಧಿಯಾಗದೆ ಇದ್ದ ಹಾಗೆಯೇ ಇರುವುದು ಪ್ರಕೃತಿಭಾವ
ಸಂಸ್ಕೃತ ಸಂಧಿಗಳು
ಸಂಸ್ಕೃತ ಸಂಧಿಗಳನ್ನು ಅಕ್ಷರಗಳ ಆಧಾರದ ಮೇಲೆ ಪುನಃ ಎರಡು ಭಾಗಗಳಾಗಿ ವಿಂಗಡಿಸಬಹುದು.
1. ಸ್ವರ ಸಂಧಿಗಳು
(1) ಸವರ್ಣ ದೀರ್ಘ ಸಂಧಿಗಳು:
(2) ಗುಣಸಂಧಿ
(3) ವೃದ್ಧಿಸಂಧಿ
(4) ಯಣ್ ಸಂಧಿ
2. ವ್ಯಂಜನ ಸಂಧಿಗಳು
(5) ಜಶ್ತ್ವಸಂಧಿ
(6) ಶ್ಚುತ್ವಸಂಧಿ
(7) ಷ್ಟುತ್ವ ಸಂಧಿ
(8) ಛತ್ವ ಸಂಧಿ
(9) ‘ಲ’ ಕಾರ ದ್ವಿತ್ವ ಸಂಧಿ
(10) ಅನುನಾಸಿಕಸಂಧಿ
(1) ಸವರ್ಣ ದೀರ್ಘ ಸಂಧಿಗಳು:
ಒಂದೇ ಜಾತಿಯ ಸ್ವರಾಕ್ಷರಗಳು ಪರಸ್ಪರ ಸೇರಿ ದೀರ್ಘರೂಪ ಪಡೆಯುವುದು ಸವರ್ಣದೀರ್ಘ ಸಂಧಿ.
ಸವರ್ಣಸ್ವರಗಳು ಒಂದರ ಮುಂದೆ ಒಂದು ಸೇರಿ ಸಂಧಿಯಾದಾಗ ಅವೆರಡರ ಸ್ಥಾನದಲ್ಲಿ ಅದೇ ಜಾತಿಯ ದೀರ್ಘಸ್ವರ ಆದೇಶವಾಗಿ ಬಂದರೆ ಅದನ್ನು ಸವರ್ಣ ದೀರ್ಘಸಂಧಿ ಎಂದು ಕರೆಯುವರು.
(ಉದಾ: ಪೂರ್ವಪದದ ಕೊನೆಯ ‘ಅ’ ಹಾಗೂ ಉತ್ತರ ಪದದ ಮೊದಲಿನ ‘ಅ’ ಸೇರಿ ‘ಆ’ ಆಗುವುದು. ಅಂತೆಯೇ ಇ + ಇ = ಈ, ಉ + ಉ = ಊ ಆಗುತ್ತವೆ)
ಸೂಚನೆ: ಪೂರ್ವಪದದ ಕೊನೆಯ ಅಕ್ಷರ ದೀರ್ಘವಾಗಿದ್ದರೆ ಅಡ್ಡಿಯೇನಿಲ್ಲ. ಅಂತೆಯೇ ಉತ್ತರ ಪದದ ಮೊದಲ ಅಕ್ಷರ ದೀರ್ಘವಾಗಿರಲೂಬಹುದು.
ಉದಾ:
ದೇವ + ಆಲಯ = ದೇವಾಲಯ (ಅ + ಆ = ಆ)
ದೇವ + ಅಸುರ = ದೇವಾಸುರ (ಅ + ಅ = ಆ)
ಮಹಾ + ಆಸನ = ಮಹಾಸನ
ಮಹಾ + ಆತ್ಮ = ಮಹಾತ್ಮ (ಆ + ಆ = ಆ)
ಮಹಾ + ಅನುಭಾವ = ಮಹಾನುಭಾವ (ಆ + ಅ = ಆ)
ಅತಿ + ಇಂದ್ರ = ಅತೀಂದ್ರ
ರವಿ + ಇಂದ್ರ = ರವೀಂದ್ರ (ಇ + ಇ = ಈ)
ಗಿರಿ + ಇಂದ್ರ = ಗಿರೀಂದ್ರ (ಇ + ಇ = ಈ)
ಗಿರಿ + ಈಶ = ಗಿರೀಶ (ಇ + ಈ = ಈ)
ಗುರು + ಉಪದೇಶ = ಗುರೂಪದೇಶ (ಉ + ಉ = ಊ)
ವಿದ್ಯಾ + ಅಭ್ಯಾಸ = ವಿದ್ಯಾಭ್ಯಾಸ (ಆ + ಅ = ಆ)
ಸರ + ಅಸುರ = ಸುರಾಸುರ
ವಧೂ + ಉಪೇತ = ವಧೂಪೇತ
ಪಂಚ + ಅಕ್ಷರಿ = ಪಂಚಾಕ್ಷರಿ
ಸುವರ್ಣ + ಅಕ್ಷರ = ಸುವರ್ಣಾಕ್ಷರ
ತತ್ವ + ಅನುಯಾಯಿ = ತತ್ವಾನುಯಾಯಿ
ರುದ್ರ + ಅಕ್ಷಿ = ರುದ್ರಾಕ್ಷಿ
ವಂಶ + ಅಭಿವೃದ್ಧಿ = ವಂಶಾಭಿವೃದ್ಧಿ
ಸಂತಾನ + ಅಭಿವೃದ್ಧಿ = ಸಂತಾನಾಭಿವೃದ್ಧಿ
ಹಿಮ + ಆಲಯ = ಹಿಮಾಲಯ
ವಿದ್ಯಾ + ಅರ್ಥಿ = ವಿದ್ಯಾರ್ಥಿ (ಆ + ಅ = ಆ)
ಸಚಿವ + ಆಲಯ = ಸಚಿವಾಲಯ
ಶಸ್ತ್ರ + ಅಸ್ತ್ರ = ಶಸ್ತ್ರಾಸ್ತ್ರ (ಅ + ಅ = ಆ)
(2) ಗುಣಸಂಧಿ:
ಪೂರ್ವಪದದ ಅಂತ್ಯದಲ್ಲಿ ‘ಅ’ ಅಥವಾ ‘ಆ’ ಸ್ವರಗಳಿದ್ದು, ಅವುಗಳಿಗೆ ‘ಇ’ ಅಥವಾ ‘ಈ’ ಸ್ವರ ಪರವಾದರೆ ಅವೆರಡರ ಸ್ಥಾನದಲ್ಲಿ ‘ಏ’ ಸ್ವರವು, ‘ಉ’ ಅಥವಾ ‘ಊ’ ಸ್ವರ ಪರವಾದರೆ ಅವೆರಡರ ಸ್ಥಾನದಲ್ಲಿ ‘ಓ’ ಸ್ವರವು, ಅದೇ ರೀತಿ ‘ಋ’ ಸ್ವರ ಪರವಾದರೆ ಅವೆರಡರ ಸ್ಥಾನದಲ್ಲಿ ‘ಅರ್’ ಆದೇಶವಾಗಿ ಬರುವುದನ್ನು ‘ಗುಣ ಸಂಧಿ’ ಎಂದು ಕರೆಯಲಾಗುತ್ತದೆ.
ಉದಾ :
ಸುರ + ಇಂದ್ರ = ಸುರೇಂದ್ರ (ಅ + ಇ = ಏ)
ದೇವ + ಈಶ = ದೇವೇಶ (ಅ + ಈ = ಏ)
ದೇವ + ಇಂದ್ರ = ದೇವೇಂದ್ರ (ಅ + ಇ = ಏ)
ಮಹಾ + ಇಂದ್ರ = ಮಹೇಂದ್ರ ( ಆ + ಇ = ಏ)
ಮಹಾ + ಈಶ = ಮಹೇಶ (ಆ + ಈ = ಏ)
ಜ್ಞಾನ + ಈಶ್ವರ = ಜ್ಞಾನೇಶ್ವರ (ಅ + ಈ = ಏ)
ಮಹಾ + ಉತ್ಸವ = ಮಹೋತ್ಸವ (ಆ + ಉ = ಓ)
ಮಹಾ + ಉರ್ಜಿತ = ಮಹೋರ್ಜಿತ (ಆ + ಉ = ಓ)
ಮಹಾ + ಉದಯ = ಮಹೋದಯ (ಆ + ಉ =ಓ)
ಅರುಣ + ಉದಯ = ಅರುಣೋದಯ (ಅ +ಉ = ಓ)
ಸೂರ್ಯ + ಉದಯ = ಸೂರ್ಯೋದಯ ( ಅ + ಉ = ಓ)
ಚಂದ್ರ + ಉದಯ = ಚಂದ್ರೋದಯ (ಅ + ಉ = ಓ)
ಮಹಾ + ಋಷಿ = ಮಹರ್ಷಿ (ಆ + ಋ = ಅರ್)
ದೇವ + ಋಷಿ = ದೇವರ್ಷಿ (ಅ + ಋ = ಅರ್)
ವೀರ + ಈಶ = ವೀರೇಶ (ಅ + ಈ = ಏ)
ರಾಜ + ಋಷಿ = ರಾಜರ್ಷಿ (ಅ + ಋ = ಅರ್)
ಸಂತಾನ + ಉತ್ಪತ್ತಿ = ಸಂತಾನೋತ್ಪತ್ತಿ (ಅ + ಉ = ಓ)
ರಾಜ್ಯ + ಉತ್ಸವ = ರಾಜ್ಯೋತ್ಸವ
ಪೂರ್ವ + ಉತ್ತರ = ಪೂರ್ವೋತ್ತರ
ಜೀವನ + ಉತ್ಸಾಹ = ಜೀವನೋತ್ಸಾಹ
(3) ವೃದ್ಧಿಸಂಧಿ:
ಅ ಆ ಕಾರಗಳ ಮುಂದೆ ಏ ಐ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಐ ಕಾರವೂ, ಓ ಔ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಔ ಕಾರವು ಆದೇಶಗಳಾಗಿ ಬಂದರೆ ಅದಕ್ಕೆ ವೃದ್ಧಿಸಂಧಿ ಎನ್ನುವರು.
ಪೂರ್ವಪದದ ಅಂತ್ಯದಲ್ಲಿ ʼಅʼ ಅಥವಾ ʼಆʼ ಸ್ವರಗಳಿದ್ದು, ಅವುಗಳಿಗೆ ʼಏʼ ಅಥವಾ ‘ಐ’ ಸ್ವರ ಪರವಾದರೆ ಅವೆರಡರ ಸ್ಥಾನದಲ್ಲಿ ‘ಐ’ ಸ್ವರವು, ಅದೇ ರೀತಿ ‘ಓ’ ಅಥವಾ ‘ಔ’ ಸ್ವರ ಪರವಾದರೆ ಅವೆರಡರ ಸ್ಥಾನದಲ್ಲಿ ‘ಔ’ ಸ್ವರವು ಆದೇಶವಾಗಿ ಬರುತ್ತದೆ. ಇದನ್ನೇ ‘ವೃದ್ಧಿ ಸಂಧಿ’ ಎಂದು ಕರೆಯಲಾಗುತ್ತದೆ.
ಉದಾ:
ಏಕ + ಏಕ = ಏಕೈಕ (ಅ + ಏ = ಐ)
ಶಿವ + ಐಕ್ಯ = ಶಿವೈಕ್ಯ (ಅ + ಐ = ಐ)
ಭಾವ + ಐಕ್ಯ = ಭಾವೈಕ್ಯ (ಅ + ಐ = ಐ)
ವನ + ಔಷಧ = ವನೌಷಧ (ಅ + ಔ = ಔ)
ಸಿದ್ಧ + ಔಷಧ = ಸಿದ್ಧೌಷಧ
ವನ + ಔಷಧಿ = ವನೌಷಧಿ (ಅ + ಔ = ಔ)
ದಿವ್ಯ + ಔಷಧಿ = ದಿವ್ಯೌಷಧಿ (ಅ + ಔ = ಔ)
ಮಹಾ + ಔದಾರ್ಯ = ಮಹೌದಾರ್ಯ (ಆ + ಔ = ಔ)
ಮಹಾ + ಏಕ = ಮಹೈಕ
ಮಹಾ + ಐಕ್ಯ = ಮಹೈಕ್ಯ
ಮಹಾ + ಓಘ = ಮಹೌಘ
ಮಹಾ + ಔಷಧ = ಮಹೌಷಧ
ಲೋಕ + ಏಕ = ಲೋಕೈಕ (ಅ + ಏ = ಐ)
ಜನ + ಐಕ್ಯ = ಜನೈಕ್ಯ (ಅ + ಐ = ಐ)
ಜಲ + ಓಘ = ಜಲೌಘ (ಅ + ಓ = ಔ)
ಅಷ್ಟ + ಐಶ್ವರ್ಯ = ಅಷ್ಟೈಶ್ವರ್ಯ
‘ಅ’ ‘ಆ’ಕಾರಗಳ ಮುಂದೆ ‘ಏ’, ‘ಐ’ ಕಾರಗಳು ಬಂದರೆ ಅವೆರಡರ ಸ್ಥಾನದಲ್ಲಿ ‘ಐ’ಕಾರವೂ ‘ಓ’, ‘ಔ’ ಕಾರಗಳು ಬಂದರೆ ಅವೆರಡರ ಸ್ಥಾನದಲ್ಲಿ ‘ಔ’ಕಾರವೂ ಆದೇಶವಾಗಿ ಬರುವುದು. ಇದಕ್ಕೆ ‘ವೃದ್ಧಿಸಂಧಿ’ ಎಂದು ಹೆಸರು
(4) ಯಣ್ ಸಂಧಿ:
ಪೂರ್ವಪದದ ಅಂತ್ಯದಲ್ಲಿನ ಇ,ಈ,ಉ,ಊ,ಋ ಸ್ವರಗಳಿಗೆ ಅನ್ಯಸ್ವರಗಳು (ಸವರ್ಣವಲ್ಲದ ಸ್ವರ) ಪರವಾದಾಗ ‘ಇ’,’ಈ’ ಸ್ವರಗಳಿಗೆ ‘ಯ್’ ಕಾರವೂ, ‘ಉ’, ‘ಊ’ ಸ್ವರಗಳಿಗೆ ‘ವ್’ ಕಾರವೂ, ‘ಋ’ ಸ್ವರಕ್ಕೆ ‘ರ್’ ಕಾರವು ಆದೇಶವಾಗಿ ಬರುವುದು. ಇದನ್ನು ‘ಯಣ್‌ಸಂಧಿ’ ಎಂದು ಕರೆಯಲಾಗುತ್ತದೆ.
ಸಂಸ್ಕೃತ ವ್ಯಾಕರಣದಲ್ಲಿ ಕೆಲವು ಸಂಜ್ಞೆಗಳನ್ನು ಮಾಡಿಕೊಳ್ಳಲಾಗಿದೆ. ಅವುಗಳಲ್ಲಿ ‘ಯಣ್’ ಎಂಬ ಸಂಜ್ಞೆಯೂ ಒಂದು. ಯ್ ರ್ ಲ್ ವ್ ಎಂಬ ನಾಲ್ಕು ವ್ಯಂಜನಗಳನ್ನು ಯಣ್ ಅಕ್ಷರಗಳೆಂದು ಗುರುತಿಸಲಾಗಿದೆ. ಸಂಧಿಯಾಗುವಾಗ ಯಣ್ ಅಕ್ಷರಗಳೆಂದು ಗುರುತಿಸಲಾಗಿದೆ. ಸಂಧಿಯಾಗುವಾಗ ಯಣ್ ಅಕ್ಷರಗಳಲ್ಲಿ ಯಾವುದಾದರೂ ಒಂದು ಅಕ್ಷರ ಆದೇಶವಾಗಿ ಬಂದರೆ ಅದೇ ಯಣ್ ಸಂಧಿ.
ಉದಾ:
ಅತಿ + ಉಕ್ತಿ = ಅತ್ಯುಕ್ತಿ (ಇ + ಉ = ಯ)
ಅತಿ + ಆಸೆ = ಅತ್ಯಾಸೆ
ಅತಿ + ಅಂತ = ಅತ್ಯಂತ
ಅತಿ + ಉನ್ನತ = ಅತ್ಯುನ್ನತ
ಅತಿ + ಉತ್ತಮ = ಅತ್ಯುತ್ತಮ
ಅತಿ + ಔದಾರ್ಯ = ಅತ್ಯೌದಾರ್ಯ
ಇತಿ + ಆದಿ = ಇತ್ಯಾದಿ (ಇ + ಆ = ಯ)
ಜಾತಿ + ಅತೀತ = ಜಾತ್ಯತೀತ (ಇ + ಅ = ಯ)
ಪ್ರತಿ + ಉಪಕಾರ = ಪ್ರತ್ಯುಪಕಾರ (ಇ + ಉ = ಯ)
ಮನು + ಅಂತರ = ಮನ್ವಂತರ (ಉ + ಅ = ವ)
ಗುರು + ಆಜ್ಞೆ = ಗರ‍್ವಾಜ್ಞೆ (ಉ + ಆ = ವಾ)
ಪಿತೃ + ಆರ್ಜಿತ = ಪಿತ್ರಾರ್ಜಿತ (ಋ + ಆ = ರ)
ಪಿತೃ + ಆಜ್ಞೆ = ಪಿತ್ರಾಜ್ಞೆ
ಅಣು + ಅಸ್ತ್ರ = ಅಣ್ವಸ್ತ್ರ
ಕೋಟಿ + ಕೋಟಿ = ಕೋಟ್ಯಾನುಕೋಟಿ (ಇ + ಓ = ಯ್)
ಅತಿ + ಅವಸರ = ಅತ್ಯವಸರ = (ಇ + ಅ = ಯ್)
ಜಾತಿ + ಅತೀತ = ಜಾತ್ಯಾತೀತ (ಇ + ಅ = ಯ್)
ಪ್ರತಿ + ಉತ್ತರ = ಪ್ರತ್ಯುತ್ತರ (ಇ + ಉ = ಯ್)
ಕೋಟಿ + ಆಧೀಶ್ವರ = ಕೋಟ್ಯಾಧೀಶ್ವರ (ಇ + ಆ = ಯ್)
ಮನು + ಆದಿ = ಮನ್ವಾದಿ (ಉ + ಆ = ವ್)
ಮನು + ಅಂತರ = ಮನ್ವಂತರ (ಉ + ಅ = ವ್)
ಕೋಟಿ + ಅಂತರ = ಕೋಟ್ಯಾಂತರ (ಇ + ಅ = ಯ್)
ಇ, ಈ , ಉ, ಊ, ಋ ಕಾರಗಳಿಗೆ ಸವರ್ಣವಲ್ಲದ ಸ್ವರ ಪರವಾದರೆ, ‘ಇ’ ‘ಈ’ ಕಾರಗಳಿಗೆ ‘ಯ’ಕಾರವೂ ಉ, ಊ ಕಾರಗಳಿಗೆ ‘ವ’ ಕಾರವೂ ಋ ಕಾರಕ್ಕೆ ‘ರ’ ಕಾರವೂ ಆದೇಶವಾಗಿ ಬರುವುದನ್ನು `ಯಣ್ ಸಂಧಿ’ ಎಂದು ಕರೆಯುವರು.
ಸಂಸ್ಕೃತ ವ್ಯಂಜನ ಸಂಧಿಗಳು
(5) ಜಶ್ತ್ವಸಂಧಿ:
ಸಂಸ್ಕೃತ ವ್ಯಾಕರಣದಲ್ಲಿ ಪೂರ್ವಪದದ ಕೊನೆಯಲ್ಲಿರುವ ಕ್,ಚ್,ಟ್,ತ್,ಪ್, ವ್ಯಂಜನಗಳಿಗೆ ಯಾವ ವರ್ಣ ಪರವಾದರೂ ಅದೇ ವರ್ಗದ ಮೂರನೆಯ ವ್ಯಂಜನಾಕ್ಷರಗಳು (ಗ್,ಜ್,ಡ್,ದ್,ಬ್,) ಆದೇಶವಾಗಿ ಬರುತ್ತವೆ. ಇದನ್ನು ‘ಜಶ್ತ್ವಸಂಧಿ’ ಎನ್ನುತಾರೆ. (ಗ್ ಜ್ ಡ್ ದ್ ಬ್ ಅಕ್ಷರಗಳನ್ನು ‘ಜಶ್’ ಎಂಬ ಸಂಜ್ಞೆಯಿಂದ ಕರೆಯಲಾಗಿದೆ.)
ಪೂರ್ವಪದ + ಉತ್ತರ ಪದ = ಸಂಧಿಪದ
ವಾಕ್ + ಈಶ = ವಾಗೀಶ (ಕ್ = ಗ)
ವಾಕ್ + ದಾನ = ವಾಗ್ದಾನ (ಕ್ = ಗ)
ವಾಕ್ + ದೇವಿ = ವಾಗ್ದೇವಿ (ಕ್ = ಗ)
ದಿಕ್ + ಅಂತ = ದಿಗಂತ (ಕ್ = ಗ್)
ಅಚ್ + ಅಂತ = ಅಜಂತ (ಚ್ = ಜ)
ಸತ್ = ಆನಂದ = ಸದಾನಂದ (ತ್ = ದ)
ಅಪ್ + ಧಿ = ಅಬ್ಧಿ (ಪ್ = ಬ್)
ದಿಕ್ + ಅಂತ = ದಿಗಂತ (ಕ್ = ಗ)
ಬೃಹತ್ + ಆಕಾಶ = ಬೃಹದಾಕಾಶ (ತ್ = ದ)
ಷಟ್ + ಆನನ = ಷಡಾನನ (ಟ್ = ಡ)
ಸಂಧಿಕಾರ್ಯ ನಡೆಯುವಾಗ ಪೂರ್ವ ಪದದ ಅಂತ್ಯದಲ್ಲಿರುವ ಕ, ಚ, ಟ, ತ, ಪ ಗಳಿಗೆ ಗ, ಜ, ಡ, ದ, ಬ ಗಳು ಆದೇಶವಾಗಿ ಬರುವುದನ್ನು ‘ಜಶ್ತ್ವಸಂಧಿ’ ಎಂದು ಕರೆಯುತ್ತೇವೆ.
(6) ಶ್ಚುತ್ವಸಂಧಿ:
‘ಶ್ಚು’ ಎಂದರೆ ಶಕಾರ ಮತ್ತು ಚವರ್ಗಾಕ್ಷರಗಳು. ಈ ಅಕ್ಷರಗಳು ಆದೇಶವಾಗಿ ಬಂದರೆ ಶ್ಚುತ್ವ ಸಂಧಿ. ಸಂಧಿಕಾರ್ಯ ನಡೆಯುವಾಗ ಪೂರ್ವ ಪದದ ಅಂತ್ಯದಲ್ಲಿರುವ ಸಕಾರ ಅಥವಾ ತವರ್ಗದ ಅಕ್ಷರಗಳಿರುತ್ತವೆ ಉತ್ತರಪದ ಶಕಾರ ಅಥವಾ ಚವರ್ಗದ ಅಕ್ಷರಗಳಿಂದ ಆರಂಭವಾಗುತ್ತದೆ. ‘ಸ’ಕಾರವಿದ್ದ ಕಡೆ ಶಕಾರವೂ ತವರ್ಗದ ಅಕ್ಷರಗಳಿದ್ದ ಕಡೆ ಚವರ್ಗದ ಅಕ್ಷರಗಳೂ ಆದೇಶವಾಗಿ ಬರುವುದನ್ನು ‘ಶ್ಚುತ್ವ ಸಂಧಿ’ ಎಂದು ಕರೆಯುತ್ತೇವೆ.
ಪೂರ್ವಪದ + ಉತ್ತರ ಪದ = ಸಂಧಿಪದ
ಮನಸ್ + ಶುದ್ಧಿ = ಮನಶ್ಶುದ್ಧಿ (ಸ್ + ಶ = ಶ)
ಯಶಸ್ + ಚಂದ್ರಿಕೆ = ಯಶಶ್ಚಂದ್ರಿಕೆ (ಸ್ + ಚ = ಶ)
ಸತ್ + ಚಿತ್ರ = ಸಚ್ಚಿತ್ರ (ತ್ + ಚ = ಚ)
ಪಯಸ್ + ಶಯನ = ಪಯಶ್ಶಯನ (ಸ್ + ಶ = ಶ)
ಶರತ್ + ಚಂದ್ರ = ಶರಚ್ಚಂದ್ರ (ತ್ + ಚ = ಚ)
ಜಗತ್ + ಜ್ಯೋತಿ = ಜಗಜ್ಜ್ಯೋತಿ (ತ್ + ಜ = )
ಬೃಹತ್+ಚತ್ರ = ಬೃಹಚ್ಛತ್ರ (ತ್ + ಚ = ಛ )
(7) ಷ್ಟುತ್ವ ಸಂಧಿ
ʼಸʼ ಕಾರ, ತ ವರ್ಗ ವ್ಯಂಜನಗಳ ಮುಂದೆ ʼಷʼ ಕಾರ, ʼಟʼ ವರ್ಗ ವ್ಯಂಜನಗಳು ಬಂದರೆ ಕ್ರಮವಾಗಿ ʼಷʼ ಕಾರ, ʼಟʼ ವರ್ಗ ವ್ಯಂಜನಗಳು ವ್ಯಂಜನಗಳು ಆದೇಶವಾದರೆ ಅದನ್ನು ʼಷ್ಟುತ್ವ ಸಂಧಿʼ ಎನ್ನುವರು.
ಉದಾಹರಣೆ:-
ಉತ್ + ಡಯನ = ಉಡ್ಡಯನ
ತತ್ + ಟಿಟ್ಟಿಭ = ತಟ್ಟಟ್ಟಿಭ
ತಪಸ್ + ಷಡ್ಭಾಗ = ತಪಷ್ಷಡ್ಭಾಗ
ಧನುಸ್ + ಟಂಕಾರ = ಧನುಷ್ಟಂಕಾರ
(8) ಛತ್ವ ಸಂಧಿ
ಪೂರ್ವಪದಾಂತ್ಯದಲ್ಲಿ ಅನುನಾಸಿಕವಲ್ಲದ ವರ್ಗೀಯ ವ್ಯಂಜನಕ್ಕೆ ಪರವಾದ ʼಶʼ ಕಾರಕ್ಕೆ ʼಛʼ ಕಾರ ಆದೇಶವಾದರೆ ಅದನ್ನು ʼಛತ್ವ ಸಂಧಿʼ ಎನ್ನುವರು.
ಉದಾಹರಣೆಗೆ:-
ಚಿತ್ + ಶಕ್ತಿ = ಚಿಚ್ + ಶಕ್ತಿ = ಚಿಚ್ಛಕ್ತಿ
ಉತ್ + ಶ್ವಾಸ = ಉಚ್ + ಶ್ವಾಸ = ಉಚ್ಛ್ವಾಸ
ವಿದ್ಯುತ್ + ಶಕ್ತಿ = ವಿದ್ಯುಚ್ + ಶಕ್ತಿ = ವಿದ್ಯುಚ್ಛಕ್ತಿ
(9) ‘ಲ’ ಕಾರ ದ್ವಿತ್ವ ಸಂಧಿ
ʼತʼ ಕಾರದ ಮುಂದೆ ʼಲʼ ಕಾರ ಬಂದರೆ ʼತʼ ಕಾರದ ಸ್ಥಾನದಲ್ಲಿ ʼಲʼ ಕಾರವು ಬಂದರೆ ಅದನ್ನು ʼಲʼ ಕಾರ ದ್ವಿತ್ವ ಸಂಧಿ ಎನ್ನುವರು.
ತತ್ + ಲೀನ = ತಲ್ಲೀನ
ಸತ್ + ಲಕ್ಷಣ = ಸಲ್ಲಕ್ಷಣ
(10) ಅನುನಾಸಿಕಸಂಧಿ:
ಪೂರ್ವಪದ + ಉತ್ತರಪದ = ಸಂಧಿಪದ
೧. ವಾಕ್+ಮಯ=ವಾಙ್ಮಯ
೨. ಷಟ್+ಮುಖ=ಷಣ್ಮುಖ
೩. ಸತ್+ಮಾನ=ಸನ್ಮಾನ
ಉನ್ + ಮಾದ = ಉನ್ಮಾದ
ತನ್ + ಮಯ = ತನ್ಮಯ
ಙ,ಞ,ಣ,ನ,ಮ ಇವು ಅನುನಾಸಿಕ ಅಕ್ಷರಗಳು. ಈ ಅಕ್ಷರಗಳು ಆದೇಶವಾಗಿ ಬಂದರೆ ಅನುನಾಸಿಕ ಸಂಧಿ. ಸಂಧಿಕಾರ್ಯ ನಡೆಯುವಾಗ ಪೂರ್ವ ಪದದ ಅಂತ್ಯದಲ್ಲಿರುವ ಕ್, ಚ್, ಟ್, ತ್, ಪ್ ಅಕ್ಷರಗಳಿರುತ್ತವೆ ಉತ್ತರಪದ ಅನುನಾಸಿಕ ಅಕ್ಷರಗಳಿಂದ ಆರಂಭವಾಗುತ್ತದೆ. ವರ್ಗದ ಕ,ಚ,ಟ,ತ,ಪ ವ್ಯಂಜನಗಳಿಗೆ ಅದೇ ವರ್ಗದ ಅನುನಾಸಿಕ ಅಕ್ಷರಗಳೂ ಆದೇಶವಾಗಿ ಬರುವುದನ್ನು ‘ಅನುನಾಸಿಕ ಸಂಧಿ’ ಎಂದು ಕರೆಯುತ್ತೇವೆ.
ಪೂರ್ವಪದ + ಉತ್ತರಪದ = ಸಂಧಿಪದ
ದಿಕ್ + ನಾಗ = ದಿಙ್ನಾಗ (ಕ್ + ನ = ಙ)
ಷಟ್ + ಮಾಸ = ಷಣ್ಮಾಸ (ಟ್ + ಮ = ಣ)
ಚಿತ್ + ಮೂಲ = ಚಿನ್ಮೂಲ (ತ್ + ಮ = ನ)
ಲಿಂಗಗಳು
ಮಾತನಾಡುವಾಗ ಕೆಲವು ಶಬ್ದಗಳನ್ನು ಕೇಳಿದಾಗ ನಮ್ಮ ಮನಸ್ಸಿಗೆ ‘ಗಂಡಸು’ ಎಂಬರ್ಥ ಹೊಳೆಯುವುದು. ಕೆಲವು ಶಬ್ದಗಳನ್ನು ಕೇಳಿದಾಗ ಮನಸ್ಸಿಗೆ ‘ಹೆಂಗಸು’ ಎಂಬ ಅರ್ಥ ಹೊಳೆಯುವುದು. ಮತ್ತೆ ಕೆಲವು ಶಬ್ದಗಳನ್ನು ಕೇಳಿದಾಗ ಹೆಂಗಸು ಮತ್ತು ಗಂಡು ಎರಡೂ ಅಲ್ಲದ ಬೇರೆ ಎಂಬ ಅರ್ಥವು ಹೊಳೆಯುವುದು. ಇದನ್ನು ಆಧಾರವಾಗಿರಿಸಿಕೊಂಡು ವ್ಯಾಕರಣದಲ್ಲಿ ಮುಖ್ಯವಾಗಿ ಮೂರು ಬಗೆಯ ಲಿಂಗಗಳನ್ನು ಗುರುತಿಸುತ್ತೇವೆ. ಅವೇ ಪುಲ್ಲಿಂಗಸ್ತ್ರೀಲಿಂಗ, ನಪುಂಸಕಲಿಂಗಗಳು.
– ಲಿಂಗಗಳು
– ಅನ್ಯಲಿಂಗದ ವಿಧಗಳು
1. ಪುಲ್ಲಿಂಗ : ಯಾವ ಶಬ್ದ ಪ್ರಯೋಗ ಮಾಡಿದಾಗ ‘ಗಂಡಸು’ ಎಂಬರ್ಥವು ಮನಸ್ಸಿಗೆ ಹೊಳೆಯುವುದೋ ಅದು ‘ಪುಲ್ಲಿಂಗ’ವೆನಿಸುವುದು.
ಉದಾಹರಣೆಗೆ:- ದೊಡ್ಡವನು, ಮುದುಕ, ಹುಡುಗ, ಅರಸು, ಮಂತ್ರಿ, ಜಟ್ಟಿ, ಶಕ್ತಿವಂತ, ತಂದೆ, ಮಾವ, ಸಹೋದರ, ಅಣ್ಣ, ತಮ್ಮ, ಚಿಕ್ಕಪ್ಪ, ಸಚಿವ, ಮದುಮಗ, ಸಂತ, ದಾಸ, ಕವಿ ಮುಂತಾದವು.
2. ಸ್ತ್ರೀಲಿಂಗ : ಯಾವ ಶಬ್ದ ಪ್ರಯೋಗ ಮಾಡಿದಾಗ ನಮ್ಮ ಭಾವನೆಗೆ ‘ಹೆಂಗಸು’ ಎಂಬ ಅರ್ಥವು ಹೊಳೆದರೆ ಅದು ‘ಸ್ತ್ರೀ’ ಲಿಂಗವೆನಿಸುವುದು. ಉದಾಹರಣೆಗೆ:- ದೊಡ್ಡವಳು, ಮುದುಕಿ, ಅತ್ತೆ, ಚಿಕ್ಕಮ್ಮ, ದೊಡ್ಡಮ್ಮ, ಹೆಂಡತಿ, ತಂಗಿ, ಸಹೋದರಿ, ರಾಣಿ, ತಾಯಿ, ಅಜ್ಜಿ, ವಿದುಷಿ, ಚಲುವೆ, ಒಳ್ಳೆಯವಳು, ಮಗಳು -ಇತ್ಯಾದಿ.
3. ನಪುಂಸಕಲಿಂಗ : ಯಾವ ಶಬ್ದವನ್ನು ಪ್ರಯೋಗ ಮಾಡಿದಾಗ ಗಂಡಸು ಅಥವಾ ಹೆಂಗಸು ಎಂಬ ಅರ್ಥ ಸ್ಪಷ್ಟವಾಗಿ ಮನಸ್ಸಿಗೆ ಹೊಳೆಯುವುದಿಲ್ಲವೋ ಅದು ನಪುಂಸಕಲಿಂಗ ಎನಿಸುವುದು. ಕನ್ನಡದಲ್ಲಿ ಎಲ್ಲಾ ಪ್ರಾಣಿಗಳನ್ನು ನಪುಂಸಕಲಿಂಗಗಳೆಂದೇ ಪರಿಗಣಿಸಲಾಗುವುದು.
ಉದಾಹರಣೆಗೆ:- ಮನೆ, ನೆಲ, ಬೆಂಕಿ, ಗದ್ದೆ, ಕತ್ತೆ, ಕೋಣ, ಎತ್ತು, ನರಿ, ನಾಯಿ, ಕಟ್ಟಿಗೆ, ಕಲ್ಲು, ಇಟ್ಟಿಗೆ, ಮಳೆ, ಮೋಡ, ಜಲ, ಹೊಳೆ, ಹಳ್ಳ, ಪುಸ್ತಕ – ಇತ್ಯಾದಿಗಳು.
ಗಮನಿಸಿ: ಎಲ್ಲಾ ಪ್ರಾಣಿಗಳು (ಹೆಣ್ಣಿರಲಿ, ಗಂಡಿರಲಿ) ಕನ್ನಡ ವ್ಯಾಕರಣದಲ್ಲಿ ನಪುಂಸಕಲಿಂಗಗಳೇ ಆಗುತ್ತವೆ.
ಕೋಣ _ ಎಮ್ಮೆ
ಹುಂಜ _ ಕೋಳಿ
ಗಂಡು ಹಂದಿ _ ಹೆಣ್ಣು ಹಂದಿ
ಎತ್ತು – ಹಸು
ಅನ್ಯಲಿಂಗದ ವಿಧಗಳು
4. ಪುನ್ನಪುಂಸಕ ಲಿಂಗಗಳು:
5. ಸ್ತ್ರೀನಪುಂಸಕ ಲಿಂಗಗಳು:
6. ನಿತ್ಯ ನಪುಂಸಕ ಲಿಂಗಗಳು
7. ವಾಚ್ಯ ಲಿಂಗಗಳು (ವಿಶೇಷ್ಯಾಧಿನಲಿಂಗಗಳು)
4. ಪುನ್ನಪುಂಸಕ ಲಿಂಗಗಳು:
ಎಲ್ಲಾ ಗ್ರಹವಾಚಕ (ಗ್ರಹವಾಚಿ) ಶಬ್ದಗಳನ್ನು ಪುಲ್ಲಿಂಗದಂತೆಯೂ ಹಾಗೂ ನಪುಂಸಕ ಲಿಂಗದಂತೆಯೂ ಬಳಸುತ್ತೇವೆ. ಆದ್ದರಿಂದ ಇವನ್ನು ಪುನ್ನಪುಂಸಕ ಲಿಂಗಗಳೆಂದು ಕರೆಯುತ್ತೇವೆ.”
ಉದಾ: ಸೂರ್ಯ, ಶನಿ, ಮಂಗಳ, ಚಂದ್ರ, ಗುರು ಇತ್ಯಾದಿ..
ಚಂದ್ರ ಮೂಡಿತು. – ನಪುಂಸಕ ಲಿಂಗ
ಚಂದ್ರ ಮೂಡಿದನು – ಪುಲ್ಲಿಂಗ
ಶನಿಯು ಕಾಡುತ್ತದೆ. – ನಪುಂಸಕ ಲಿಂಗ
ಶನಿಯು ಕಾಡುತ್ತಾನೆ. – ಪುಲ್ಲಿಂಗ
ಸೂರ್ಯ ಉದಯವಾಯಿತು. – ನಪುಂಸಕ ಲಿಂಗ
ಸೂರ್ಯ ಉದಯಿಸಿದನು. – ಪುಲ್ಲಿಂಗ
ಈ ಮೇಲಿನ ವಾಕ್ಯಗಳಲ್ಲಿ ಚಂದ್ರ, ಸೂರ್ಯ, ಶನಿ ಶಬ್ದಗಳು ಪುಲ್ಲಿಂಗ ಹಾಗೂ ನಪುಂಸಕಲಿಂಗಗಳಲ್ಲಿ ಬಳಕೆಯಾಗಿರುವುದು ಕಾಣಬಹುದು.
5. ಸ್ತ್ರೀನಪುಂಸಕ ಲಿಂಗಗಳು:
ನಾಮಪದಗಳು ಸಂಧರ್ಭಕ್ಕನುಗುಣವಾಗಿ ಸ್ತ್ರೀಲಿಂಗ ಹಾಗೂ ನಪುಂಸಕ ಲಿಂಗದಂತೆಯೂ ಬಳಸುತ್ತೇವೆ. ಆದುದರಿಂದ ಇದಕ್ಕೆ ಸ್ತ್ರೀನಪುಂಸಕ ಲಿಂಗಗಳೆಂದು ಕರೆಯುತ್ತೇವೆ.” ಸ್ತ್ರೀ ದೇವರುಗಳ ಹೆಸರುಗಳನ್ನು ಉದಾಯೊಂದಿಗೆ ಕಾಣಬಹುದು.
ಉದಾ: ದೇವತೆ, ಲಕ್ಷ್ಮೀ, ಸರಸ್ವತಿ, ಶಾರದೆ
ಲಕ್ಷ್ಮೀ ಒಲಿದಳು. – ಸ್ತ್ರೀ ಲಿಂಗ
ಲಕ್ಷ್ಮೀ ಒಲಿಯಿತು. – ನಪುಂಸಕ ಲಿಂಗ
ದೇವತೆ ಒಲಿದಳು. – ಸ್ತ್ರೀಲಿಂಗ
ದೇವತೆ ಒಲಿಯಿತು. – ನಪುಂಸಕ
ಸರಸ್ವತಿ ಕೃಪೆ ಮಾಡಿದಳು. – ಸ್ತ್ರೀಲಿಂಗ
ಸರಸ್ವತಿ ಕೃಪೆ ಮಾಡಿತು. – ನಪುಂಸಕ ಲಿಂಗ
ಹುಡುಗಿ ಓದುತ್ತದೆ. – ನಪುಂಸಕ
ಹುಡುಗಿ ಓದುವಳು. – ಸ್ತ್ರೀಲಿಂಗ
6. ನಿತ್ಯ ನಪುಂಸಕ ಲಿಂಗಗಳು :
ಶಿಶು, ಮಗು, ಕೂಸು ಶಬ್ದಗಳು ಯಾವಾಗಲೂ ನಪುಂಸಕ ಲಿಂಗದಲ್ಲಿಯೇ ಪ್ರಯೋಗಿಸಲ್ಪಡುತ್ತವೆ.
ಈ ರೀತಿ ಯಾವಾಗಲೂ ನಪುಂಸಕ ಲಿಂಗದಲ್ಲಿಯೇ ಉಪಯೋಗಿಸುವುದರಿಂದ ಈ ರೀತಿಯ ಪದಗಳನ್ನು ನಿತ್ಯ ನಪುಂಸಕ ಲಿಂಗಗಳೆಂದು ಕರೆಯುತ್ತಾರೆ.
ಉದಾ:
ಶಿಶು ಜನಿಸಿತು.
ಮಗು ಮಲಗುತ್ತಿದೆ.
ಕೂಸು ಅಳುತ್ತಿದೆ.
ದಂಡು ಬಂತು.
ಜನ ಬಂದರು.
ಈ ಮೇಲೆ ನೀಡಿರುವ ಉದಾಹರಣೆಗಳಲ್ಲಿ ಶಿಶು, ಮಗು, ಕೂಸು, ದಂಡು, ಜನ ಇವು ಗಂಡಾದರೂ ಆಗಿರಬಹುದು ಅಥವಾ ಹೆಣ್ಣಾದರೂ ಆಗಿರಬಹುದು. ಈ ರೀತಿಯಾಗಿದ್ದಾಗ ಪ್ರಯೋಗದಲ್ಲಿ ಮಾತ್ರ ನಪುಂಸಕ ಲಿಂಗದಂತೆ ಬಳಸಬೇಕು. ಇಂತಹ ಪದಗಳನ್ನು ನಿತ್ಯನಪುಂಸಕಲಿಂಗವೆಂದು ಕರೆಯುತ್ತೇವೆ.
7. ವಾಚ್ಯ ಲಿಂಗಗಳು (ವಿಶೇಷ್ಯಾಧಿನಲಿಂಗಗಳು) : ಪುಲ್ಲಿಂಗ, ಸ್ತ್ರೀಲಿಂಗ ಮತ್ತು ನಪುಂಸಕಲಿಂಗ ಮೂರರಲ್ಲೂ ಪ್ರಯೋಗವಾಗುವ ಶಬ್ದಗಳೇ ವಾಚ್ಯಲಿಂಗ ಅಥವಾ ವಿಶೇಷ್ಯಾಧೀನ ಲಿಂಗಗಳು.
ನಾನು, ನೀನು, ತಾನು ಎಂಬ ಸರ್ವನಾಮಗಳು. ಒಳ್ಳೆಯ, ಕೆಟ್ಟ, ದೊಡ್ಡ, ಚಿಕ್ಕ ಮೊದಲಾದ ಗುಣವಾಚಕ ಶಬ್ದಗಳು ಮೂರು ಲಿಂಗಗಳಲ್ಲೂ ಪ್ರಯೋಗವಾಗುತ್ತವೆ. ಆದುದರಿಂದ ಅವನ್ನು ವಾಚ್ಯಲಿಂಗ ಅಥವಾ ವಿಶೇಷ್ಯಾಧೀನಲಿಂಗ ಎಂದು ಕರೆಯುತ್ತಾರೆ.”
ಉದಾ: ಪುಲ್ಲಿಂಗ, ಸ್ತ್ರೀಲಿಂಗ ಮತ್ತು ನಪುಂಸಕಲಿಂಗದಲ್ಲಿ ಉದಾಹರಣೆಯೊಂದಿಗೆ ಪ್ರಯೋಗಿಸಿ ತಿಳಿಯೋಣ.
ʼನಾನುʼ ಎಂಬುದಕ್ಕೆ:
ನಾನು ಚಿಕ್ಕವನು – (ಪುಲ್ಲಿಂಗ)
ನಾನು ಚಿಕ್ಕವಳು – (ಸ್ತ್ರೀಲಿಂಗ)
ನಾನು ಚಿಕ್ಕದು – (ನಪುಂಸಕ ಲಿಂಗ)
ʼನೀನುʼ ಎಂಬುದಕ್ಕೆ:
ನೀನು ಗಂಡಸು – (ಪುಲ್ಲಿಂಗ)
ನೀನು ಹೆಂಗಸು – (ಸ್ತ್ರೀಲಿಂಗ)
ನೀನು ಮರ – (ನಪುಂಸಕ ಲಿಂಗ)
ʼತಾನುʼ ಎಂಬುದಕ್ಕೆ:
ತಾನು ಚಿಕ್ಕವನೆಂದು ತಿಳಿದನು. – (ಪುಲ್ಲಿಂಗ)
ತಾನು ಚಿಕ್ಕವಳೆಂದು ತಿಳಿದಳು. – (ಸ್ತ್ರೀಲಿಂಗ)
ತಾನು ಚಿಕ್ಕದೆಂದು ತಿಳಿಯಿತು. – (ನಪುಂಸಕ ಲಿಂಗ)
ʼಒಳ್ಳೆಯʼ ಎಂಬುದಕ್ಕೆ:
ಒಳ್ಳೆಯ ಗಂಡಸು– (ಪುಲ್ಲಿಂಗ)
ಒಳ್ಳೆಯ ಹೆಂಗಸು – (ಸ್ತ್ರೀಲಿಂಗ)
ಒಳ್ಳೆಯ ಜನ – (ನಪುಂಸಕ ಲಿಂಗ)
ʼದೊಡ್ಡʼ ಎಂಬುದಕ್ಕೆ:
ದೊಡ್ಡವನು – (ಪುಲ್ಲಿಂಗ)
ದೊಡ್ಡವಳು – (ಸ್ತ್ರೀಲಿಂಗ)
ದೊಡ್ಡದು – (ನಪುಂಸಕ ಲಿಂಗ)
ಗುಣವಾಚಕ ಶಬ್ದಗಳ ಮೇಲೆ ಲಿಂಗಗಳ ಪ್ರಯೋಗ
ಪುಲ್ಲಿಂಗ ಸ್ತ್ರೀಲಿಂಗ ನಪುಂಸಕಲಿಂಗ
ಒಳ್ಳೆಯವನು ಒಳ್ಳೆಯವಳು ಒಳ್ಳೆಯದು
ಚಿಕ್ಕವನು ಚಿಕ್ಕವಳು ಚಿಕ್ಕದು
ದೊಡ್ಡವನು ದೊಡ್ಡವಳು ದೊಡ್ಡದು
ಹಳಬನು ಹಳಬಳು ಹಳೆಯದು
ಉದಾ: ನೀನು ಒಳ್ಳೆಯವನು – (ಪುಲ್ಲಿಂಗ) ನೀನು ಒಳ್ಳೆಯವಳು – (ಸ್ತ್ರೀಲಿಂಗ) ನೀನು ಒಳ್ಳೆಯದು – (ನಪುಂಸಕ ಲಿಂಗ) ಪುಲ್ಲಿಂಗ ಸ್ತ್ರೀಲಿಂಗ ನಪುಂಸಕಲಿಂಗ
ಅವನು ಅವಳು ಅದು
ಇವನು ಇವಳು ಇದು
ನಾನು ನಾನು ನಾನು
ನೀನು ನೀನು ನೀನು
ಯಾವನು ಯಾವಳು ಯಾವುದು
ವಚನಗಳು
ಒಂದು ಎಂಬುದನ್ನು ಸೂಚಿಸುವ ಶಬ್ದಗಳೆಲ್ಲ ಏಕವಚನಗಳು. ಒಂದಕ್ಕಿಂತ ಹೆಚ್ಚು ಎಂಬುದನ್ನು ಸೂಚಿಸುವ ಶಬ್ದಗಳಿಗೆ ಬಹುವಚನ ಎನ್ನುತ್ತೇವೆ.
ಕನ್ನಡ ಭಾಷೆಯಲ್ಲಿ ಏಕವಚನ, ಬಹುವಚನಗಳೆಂದು ಎರಡು ಪ್ರಕಾರಗಳಿವೆ.
ಕನ್ನಡದ ವಚನಗಳಲ್ಲಿ ಮುಖ್ಯವಾಗಿ ಎರಡು ವಿಧಗಳಿವೆ. ಅವುಗಳೆಂದರೆ:
1. ಏಕವಚನ (ಒಂದು)
2. ಬಹುವಚನ (ಒಂದಕ್ಕಿಂತ ಹೆಚ್ಚು)
“ಸಾಹಿತ್ಯದ ದೃಷ್ಠಿಯಲ್ಲಿ ವಚನ ಎಂದರೆ – “ಪರಿಶುದ್ಧ / ನೀತಿಯುಕ್ತ ಮಾತು ಎಂದರ್ಥ. ಆದರೆ ವ್ಯಾಕರಣದ ದೃ಼ಷ್ಠಿಯಲ್ಲಿ ವಚನ ಎಂದರೆ” ಸಂಖ್ಯೆ” ಎಂದರ್ಥ.
ಸಂಸ್ಕೃತದಲ್ಲಿ ಮೂರು ವಚನಗಳಿವೆ.
1. ಏಕವಚನ (ಒಂದು)
2. ದ್ವಿವಚನ (ಎರಡು)
3. ಬಹುವಚನ (ಎರಡಕ್ಕಿಂತ ಹೆಚ್ಚು)
1. ಏಕವಚನ: “ಒಬ್ಬ ವ್ಯಕ್ತಿ, ಒಂದು ವಸ್ತು, ಒಂದು ಸ್ಥಳ ಎಂದು ಹೇಳುವ ಶಬ್ದಗಳಿಗೆ ʼಏಕವಚನʼ ಎಂದು ಕರೆಯುತ್ತಾರೆ.
ಉದಾ: ನಾನು, ನೀನು, ಅವನು, ಅದು, ಮರ, ಅರಸ, ರಾಣಿ, ಮನೆ, ಊರು, ಕವಿ, ತಂದೆ, ತಾಯಿ, ಇತ್ಯಾದಿ
2) ಬಹುವಚನ: “ಒಂದಕ್ಕಿಂತ ಹೆಚ್ಚು ವ್ಯಕ್ತಿ, ವಸ್ತುಗಳನ್ನು ಕುರಿತು ಹೇಳುವ ಶಬ್ದಗಳಿಗೆ ʼಬಹುವಚನʼ ಎಂದು ಕರೆಯುತ್ತಾರೆ.
ಉದಾ: ನಾವು, ನೀವು, ಅವರು, ಅವು, ಮರಗಳು, ಅರಸರು, ರಾಣಿಯರು, ಮನೆಗಳು, ಊರುಗಳು, ಕವಿಗಳು, ಇತ್ಯಾದಿ
ಒಂದಕ್ಕಿಂತ ಹೆಚ್ಚು ವ್ಯಕ್ತಿ ಅಥವಾ ವಸ್ತುವನ್ನು ಕುರಿತು ಮಾತನಾಡುವಾಗ ಬಹುವಚನ ಪ್ರತ್ಯಯ ಬಳಕೆಯಾಗುತ್ತದೆ.
ಬಹುವಚನ ಪ್ರತ್ಯಯ ಬಳಕೆಯಾದಾಗ ಕ್ರಿಯಾಪದದ ರೂಪದಲ್ಲಿ ವ್ಯತ್ಯಾಸವಾಗಿ ಅಲ್ಲಿಯೂ ಬಹುವಚನದ ರೂಪ ಬಳಕೆಯಾಗುತ್ತದೆ.
ದ್ವಿವಚನ: ದ್ವಿವಚನವನ್ನು ಸಂಸ್ಕೃತದಲ್ಲಿ ಮಾತ್ರ ಬಳಸಲಾಗುವುದು. ದ್ವಿ ಎಂದರೆ ಎರಡು ಎಂದರ್ಥ. ಎರಡು ನಾಮಪದಗಳನ್ನು ತಿಳಿಸುವಾಗ ದ್ವಿವಚನವನ್ನು ಬಳಸಲಾಗುತ್ತದೆ.
ಉದಾ: ಕಣ್ಣುಗಳು, ಕಾಲುಗಳು, ಕೈಗಳು, ಕಿವಿಗಳು ಇತ್ಯಾದಿ.
ಏಕವಚನ ಬಹುವಚನ
ಅಣ್ಣ ಅಣ್ಣಂದಿರು
ಗುರು ಗುರುಗಳು
ಮನೆ ಮನೆಗಳು
ಕಣ್ಣು (FDA 2017) ಕಣ್ಣುಗಳು
ಅಂಗುಲ (FDA 1991) ಅಂಗುಲಗಳು
ಮಗು ( ಪ್ರಾ.ಶಿ 2001) ಮಕ್ಕಳು
ದೊಡ್ಡವನು (ಪುಲ್ಲಿಂಗ) ದೊಡ್ಡವರು
ದೊಡ್ಡವಳು (ಸ್ತ್ರೀಲಿಂಗ) ದೊಡ್ಡವಳು
ದೊಡ್ಡದು (ನಪುಂಸಕಲಿಂಗ) ದೊಡ್ಡವು
ಈ ಕೆಳಗೆ ಕೆಲವು ಉದಾಹರಣೆಗಳನ್ನು ನೀಡಲಾಗಿದೆ. ಅವುಗಳಲ್ಲಿ ಬರುವ ಬಹುವಚನ ಪ್ರತ್ಯಯಗಳ ಬಗ್ಗೆ ತಿಳಿಯೋಣ.
ಏಕವಚನದ ನಾಮಪ್ರಕೃತಿಗಳಿಗೆ ಅರು, ವು, ಗಳು, ಅಂದಿರು, ಅಂದಿರುಗಳು, ಇರು, ವು ಇತ್ಯಾದಿ ಬಹುವಚನ
ಸೂಚಕಗಳು ಸೇರಿ ಬಹುವಚನ ಪದಗಳಾಗುತ್ತವೆ.
ವಚನ = ನಾಮಪ್ರಕೃತಿ+ಪ್ರತ್ಯಯಗಳು
ನಾಮಪ್ರಕೃತಿ + ಪ್ರತ್ಯಯಗಳು = ನಾಮಪದ
ಅರಸ + ಅರು = ಅರಸರು
ಬಾಲಕಿ + ಅರು = ಬಾಲಕಿಯರು
ಬಾಲಕ + ಅರು = ಬಾಲಕರು
ಅಕ್ಕ + ಅಂದಿರು = ಅಕ್ಕಂದಿರು
ಚಿಕ್ಕಪ್ಪ + ಅಂದಿರು = ಚಿಕ್ಕಪ್ಪಂದಿರು
ಮರ + ಗಳು = ಮರಗಳು
ದನ + ಗಳು = ದನಗಳು
ಮಗು + ಕಳು = ಮಕ್ಕಳು
ನೀನು + ವು = ನೀವು
ಅವನು + ಅರು = ಅವರು
ಈ ಮೇಲಿನ ಉದಾಹರಣೆಗಳನ್ನು ಗಮನಿಸಿ. ಉದಾ:
– ಅರಸ, ಬಾಲಕಿ, ಬಾಲಕ ಎಂಬ ಪದಗಳಿಗೆ -ಅರು ಎಂಬ ಬಹುವಚನ ಪ್ರತ್ಯಯ ಸೇರಿ ಅರಸರು, ಬಾಲಕಿಯರು, ಬಾಲಕರು ಎಂಬ ಬಹುವಚನರೂಪ ಪದಗಳಾಗಿವೆ.
– ಈ ಉದಾಹರಣೆಗಲ್ಲಿ ಸಂಬಂಧವಾಚಿ ಪ್ರತ್ಯಯಗಳು ಬಳಕೆಯಾಗಿದ್ದು -ಅಂದಿರು ಎಂಬ ಬಹುವಚನ ಪ್ರತ್ಯಯ ಬಳಕೆಯಾಗಿದೆ. ಅಕ್ಕ+ಅಂದಿರು=ಅಕ್ಕಂದಿರು, ಚಿಕ್ಕಪ್ಪ+ಅಂದಿರು= ಚಿಕ್ಕಪ್ಪಂದಿರು.
– ಮರ, ದನ ಈ ಪದಗಳಿಗೆ -ಗಳು ಎಂಬ ಬಹುವಚನ ಪ್ರತ್ಯಯ ಸೇರಿ ಮರಗಳು, ದನಗಳು ಎಂಬ ಬಹುವಚನರೂಪ ನಾಮಪದಗಳಾಗಿವೆ.
– ಅದೇ ರೀತಿ ವಚನಗಲ್ಲಿ ಸರ್ವನಾಮಪದಗಳೇನು ಹೊರತಾಗಿಲ್ಲ. ನೀನು ಏಕವಚನ ಪದಕ್ಕೆ _ವು ಬಹುವಚನ ಪ್ರತ್ಯಯ ಬಳಕೆಯಾಗಿದ್ದು ನೀನು+ವು =ನೀವು ಎಂಬ ಬಹುವಚನ ಪದವಾಗಿದೆ. ಮಗು ನಾಮಪ್ರಕೃತಿಗೆ -ಕಳು ಬಹುವಚನ ಪ್ರತ್ಯಯ ಸೇರಿ ಮಕ್ಕಳು ಎಂಬ ಬಹುವಚನ ಪದವಾಗಿದೆ.
ಕೆಳಗಿನ ವಾಕ್ಯಗಳನ್ನು ಗಮನಿಸಿ ವ್ಯತ್ಯಾಸ ತಿಳಿಯಿರಿ :
೧) ನನ್ನ ಬಳಿ ಒಂದು ಚೆಂಡು ಇದೆ.
೨) ಅನ್ವರನ ಬಳಿ ನಾಲ್ಕು ಚೆಂಡುಗಳು ಇವೆ.
೩) ಬೆಂಗಳೂರಿನಿಂದ ನಮ್ಮ ಶಾಲೆಗೆ ಒಬ್ಬಳು ಹುಡುಗಿ ಬಂದಿದ್ದಾಳೆ.
೪) ಮೈಸೂರಿನಿಂದ ನಮ್ಮ ಶಾಲೆಗೆ ಮೂವರು ಹುಡುಗಿಯರು ಬಂದಿದ್ದಾರೆ.
೫) ನಾಳೆ ವಿಜಯಪುರಕ್ಕೆ ಚೆಸ್ ಪಂದ್ಯದಲ್ಲಿ ಭಾಗವಹಿಸಲು ಒಬ್ಬ ಹುಡುಗ ಹೋಗುತ್ತಾನೆ.
೬) ನಾಳೆ ಬಾದಾಮಿಗೆ ಕ್ರಿಕೆಟ್ ಪಂದ್ಯದಲ್ಲಿ ಭಾಗವಹಿಸಲು ಹದಿನಾರು ಹುಡುಗರು ಹೋಗುತ್ತಾರೆ.
೧ನೆಯ ವಾಕ್ಯ ಗಮನಿಸಿ . ಇಲ್ಲಿ ಚೆಂಡು ಎಂಬುದು ನಾಮಪದ. ಇದೆ ಎಂಬುದು ಕ್ರಿಯಾಪದ.
೨ನೆಯ ವಾಕ್ಯ ಗಮನಿಸಿ ಚೆಂಡುಗಳು ಎಂಬುದು ನಾಮಪದ. ಇವೆ ಎಂಬುದು ಕ್ರಿಯಾಪದ.
ಮೊದಲ ವಾಕ್ಯದಲ್ಲಿ ಚೆಂಡು ಒಂದು ಇದೆ. ಇದರಿಂದ ಚೆಂಡು ಎಂಬ ಪದ ಬಳಕೆಯಾಗಿದೆ.
ಆದರೆ ಎರಡನೆಯ ವಾಕ್ಯದಲ್ಲಿ ಒಂದಕ್ಕಿಂತ ಹೆಚ್ಚು(ನಾಲ್ಕು) ಚೆಂಡುಗಳಿವೆ. ಇದರಿಂದ ಚೆಂಡುಗಳು ಎಂಬ ಪದ ಬಳಕೆಯಾಗಿದೆ. ಇಲ್ಲಿ -ಗಳು ಎಂಬುದು ಬಹುವಚನ ಸೂಚಿಸುವ ಪ್ರತ್ಯಯ.
೩ನೆಯ ವಾಕ್ಯ ಗಮನಿಸಿ, ಇಲ್ಲಿ ಹುಡುಗಿ ಎಂಬುದು ನಾಮಪದ. ಬಂದಿದ್ದಾಳೆ ಎಂಬುದು ಕ್ರಿಯಾಪದ. ೪ನೆಯ ವಾಕ್ಯ ಗಮನಿಸಿ, ಹುಡುಗಿಯರು ಎಂಬುದು ನಾಮಪದ ಬಂದಿದ್ದಾರೆ ಎಂಬುದು ಕ್ರಿಯಾಪದ.
ಮೊದಲ ವಾಕ್ಯದಲ್ಲಿ ಒಬ್ಬಳು ಹುಡುಗಿ ಎಂದಿರುವುದರಿಂದ ಹುಡುಗಿ ಎಂಬ ಪದ ಬಳಕೆಯಾಗಿದೆ. ಆದರೆ ಎರಡನೆಯ ವಾಕ್ಯದಲ್ಲಿ ಒಂದಕ್ಕಿಂತ ಹೆಚ್ಚು ಹುಡುಗಿಯರಿರುವುದರಿಂದ ಹುಡುಗಿಯರು ಎಂಬ ಪದ ಬಳಕೆಯಾಗಿವೆ. ಇಲ್ಲಿ -ಅರು ಎಂಬುದು ಬಹುವಚನ ಸೂಚಿಸುವ ಪ್ರತ್ಯಯ.
೫ನೆಯ ವಾಕ್ಯ ಗಮನಿಸಿ. ಇಲ್ಲಿ ಹುಡುಗಎಂಬುದು ನಾಮಪದ. ಹೋಗುತ್ತಾನೆಎಂಬುದು
ಕ್ರಿಯಾಪದ. ೬ನೆಯ ವಾಕ್ಯ ಗಮನಿಸಿ. ಹುಡುಗರು ಎಂಬುದು ನಾಮಪದ. ಹೋಗುತ್ತಾರೆ
ಎಂಬುದು ಕ್ರಿಯಾಪದ. ಮೊದಲ ವಾಕ್ಯದಲ್ಲಿ ಒಬ್ಬ ಹುಡುಗ ಎಂದಿರುವುದರಿಂದ ಹುಡುಗ
ಕ್ರಿಯಾಪದಗಳು
– ಕ್ರಿಯಾಪದಗಳು
– ಕ್ರಿಯಾಪದ ಎಂದರೇನು?
– ಕ್ರಿಯಾಪ್ರಕೃತಿ ಅಥವಾ ಧಾತುಗಳ ವಿಧಗಳು:
– (1) ಮೂಲ ಧಾತುಗಳು:
– (2) ಸಾಧಿತ/ಪ್ರತ್ಯಯಾಂತ ಧಾತು:
– (3) ಪ್ರೇರಣಾರ್ಥಕ ಎಂದರೆ:
– (4) ಸಕರ್ಮಕ ಮತ್ತು (5) ಅಕರ್ಮಕ ಧಾತುಗಳು :
– (6) ವಿಧ್ಯರ್ಥಕ (ವಿಧಿ + ಅರ್ಥ) ಕ್ರಿಯಾಪದ :
– (7) ನಿಷೇಧಾರ್ಥಕ ಕ್ರಿಯಾಪದಗಳು :
– (8) ಸಂಭಾವನಾರ್ಥಕ ಕ್ರಿಯಾಪದಗಳು :
ಕ್ರಿಯಾಪದ ಎಂದರೇನು?
ಕರ್ತೃವಿನ ಕಾರ್ಯ ತಿಳಿಸುವ ಪದವೇ ʼಕ್ರಿಯಾಪದʼ . ಕ್ರಿಯಾಪದದ ಮೂಲ ರೂಪವನ್ನು ʼಕ್ರಿಯಾಧಾತುʼ ಎಂದು ಕರೆಯಲಾಗುವುದು.
ಉದಾ: ಅವನು ಓದುತ್ತಿದ್ದಾನೆ.
ಈ ವಾಕ್ಯದಲ್ಲಿ ಓದುತ್ತಿದ್ದಾನೆ – ಕ್ರಿಯಾಪದ
ಓದು – ಕ್ರಿಯಾಧಾತು
ಕ್ರಿಯಾಪದಗಳು ಭಾಷೆಯಲ್ಲಿ ಪ್ರಮುಖ ಸ್ಥಾನ ಪಡೆಯುತ್ತವೆ. ಕರ್ತೃವಿನ ಕಾರ್ಯ ತಿಳಿಸುವುದೇ ಕ್ರಿಯಾಪದ. ಅಂದರೆ ಒಂದು ಕ್ರಿಯೆಯ ಪೂರ್ಣ ಅರ್ಥವನ್ನು ಕೊಡುವ ಪದಗಳನ್ನು ‘ಕ್ರಿಯಾಪದ’ ಎಂದು ಕರೆಯಲಾಗುತ್ತದೆ. ಕ್ರಿಯಾಪದವು ಕರ್ತೃವಿನ ಲಿಂಗ ಮತ್ತು ವಚನಗಳಿಗೆ ಅನುಗುಣವಾಗಿ ವರ್ತಿಸುತ್ತದೆ.
ಉದಾ : ಮಾಡುತ್ತಾನೆ, ಮಾಡಿದನು, ಮಾಡುವನು, ಮಾಡಲಿ, ಮಾಡನು – ಈ ಎಲ್ಲಾ ಕ್ರಿಯಾಪದಗಳ ಮೂಲರೂಪ ‘ಮಾಡು’ ಆಗಿದೆ.
ಇಂಥ ಕ್ರಿಯಾಪದದ ಮೂಲರೂಪವನ್ನು ‘ಕ್ರಿಯಾಪ್ರಕೃತಿ’ ಅಥವಾ ‘ಧಾತು’ ಎನ್ನುವರು.
ಕ್ರಿಯಾಪ್ರಕೃತಿ ಅಥವಾ ಧಾತುಗಳ ವಿಧಗಳು:
ಧಾತುಗಳಲ್ಲಿ ಮುಖ್ಯವಾಗಿ ಎರಡು ವಿಧಗಳಿವೆ.
1. ಮೂಲಧಾತು (ಸಹಜ)ಗಳು
2. ಸಾಧಿತಧಾತು/ಪ್ರತ್ಯಯಾಂತ ಧಾತುಗಳು
(1) ಮೂಲ ಧಾತುಗಳು:
ಒಂದು ಭಾಷೆಯಲ್ಲಿ ಆರಂಭದಿಂದಲೂ ಇರುವ ಧಾತುಗಳಿಗೆ “ಮೂಲಧಾತು / ಸಹಜಧಾತು” ಎಂದು ಹೆಸರು.
ಉದಾ: ಹಾಡು, ಆಡು, ಕಲಿ, ತೆಗಳು, ಎಳೆ, ಸೆಳೆ ಮಾಡು, ತಿಳಿ, ಅರಿ, ಸುರಿ, ಅರಸು, ಸೆಳೆ, ಓದು, ಹೋಗು, ಬರು, ನಡೆ, ನೋಡು, ಹುಟ್ಟು, ಅಂಜು, ಸುತ್ತು, ಬಿತ್ತು, ಹೊಗಳು, ತಿನ್ನು, ಓಡು, ಮುಚ್ಚು, ಒಪ್ಪು, ಏರು, ಇಳಿ, ಬೀಳು, ಬರೆ, ತೂಗು, ಮಲಗು, ಏಳು, ನಡೆ, ಈಜು, ಬೆಳಗು ಇತ್ಯಾದಿ..
(2) ಸಾಧಿತ/ಪ್ರತ್ಯಯಾಂತ ಧಾತು:
ಕನ್ನಡದ ಕೆಲವು ನಾಮಪ್ರಕೃತಿಗಳ ಮೇಲೂ ಮತ್ತು ಕೆಲವು ಅನುಕರಣ ಶಬ್ದಗಳ ಹಾಗೂ ಸಂಸ್ಕೃತದ ಕೆಳವು ನಾಮಪ್ರಕೃತಿಗಳ ಮೇಲೂ ʼಇಸುʼ ಎಂಬ ಪ್ರತ್ಯಯ ಸೇರಿದಾಗ ರೂಪಗೊಳ್ಳುವ ಧಾತುಗಳನ್ನು ಪ್ರತ್ಯಯಾಂತ ʼಧಾತು/ಸಾಧಿತʼ ಧಾತುಗಳೆಂದು ಹೆಸರು.
ನಾಮಪ್ರಕೃತಿ + ಪ್ರತ್ಯಯ = ಸಾಧಿತ ಧಾತು
ಅಬ್ಬರ + ಇಸು = ಅಬ್ಬರಿಸು
ಕನ್ನಡ + ಇಸು = ಕನ್ನಡಿಸು
ಪ್ರೀತಿ + ಇಸು = ಪ್ರೀತಿಸು
ಮುನಿ + ಇಸು = ಮುನಿಸು
ಕಾಡು + ಇಸು = ಕಾಡಿಸು
ನೋವು + ಇಸು = ನೋಯಿಸು
ಸಾವು + ಇಸು = ಸಾಯಿಸು
ಬದುಕು + ಇಸು = ಬದುಕಿಸು
ಶೋಕ + ಇಸು = ಶೋಕಿಸು
ಅನುಕರಣಾ ಶಬ್ದಗಳು ಧಾತುಗಳಾಗುವಿಕೆ
ಧಗ ಧಗ + ಇಸು = ಧಗಧಗಿಸು
ಥಳ ಥಳ + ಇಸು = ಥಳಥಳಿಸು
ಛಟಪಟ + ಇಸು = ಛಟಪಟಿಸು
ಗಮಗಮ + ಇಸು = ಗಮಗಮಿಸು
ನಳ ನಳ + ಇಸು = ನಳನಳಿಸು
ಸಂಸ್ಕೃತದ ಕೆಲವು ನಾಮ ಪ್ರಕೃತಿಗಳೊಂದಿಗೆ ಕನ್ನಡದ ಇಸು ಪ್ರತ್ಯಯ ಸೇರಿ ಕನ್ನಡದ ಧಾತುಗಳೇ ಆಗಿ, ಪ್ರತ್ಯಯಾಂತ ಧಾತುಗಳಾಗುತ್ತವೆ. ಉದಾ:
ನಾಮಪ್ರಕೃತಿ + ಪ್ರತ್ಯಯ = ಸಾಧಿತ ಧಾತು
ರಕ್ಷಾ + ಇಸು = ರಕ್ಷಿಸು
ಪ್ರಯತ್ನ + ಇಸು = ಪ್ರಯತ್ನಿಸು
ಸಿದ್ದಿ + ಇಸು = ಸಿದ್ದಿಸು
ಯತ್ನ + ಇಸು = ಯತ್ನಿಸು
ಭಾವ + ಇಸು = ಭಾವಿಸು
ಕರುಣೆ + ಇಸು = ಕರುಣಿಸು
ದುಃಖ + ಇಸು = ದುಃಖಿಸು
ಸುಖ + ಇಸು = ಸುಖಿಸು
ಸೇವನೆ + ಇಸು = ಸೇವಿಸು
ಸ್ತುತಿ + ಇಸು = ಸ್ತುತಿಸು
ಶೋಕ + ಇಸು = ಶೋಕಿಸು
ಲೇಪನ + ಇಸು = ಲೇಪಿಸು
ಜಪ + ಇಸು = ಜಪಿಸು
ಕ್ಷಮಾ + ಇಸು = ಕ್ಷಮಿಸು
(3) ಪ್ರೇರಣಾರ್ಥಕ ಎಂದರೆ:
ಇನ್ನೋಬ್ಬರಿಂದ ಕೆಲಸವನ್ನು/ಕಾರ್ಯವನ್ನು ಮಾಡಿಸುವುದು ಎಂದರ್ಥ ಅಥವಾ ಒಬ್ಬರ ಪ್ರೇರಣೆಯಿಂದ ಇನ್ನೋಬ್ಬರು ಕಾರ್ಯ ನಡೆಯುವಂತೆ ಮಾಡುವುದು.
ನಾಮಪ್ರಕೃತಿ + ಪ್ರತ್ಯಯ + ಸಾಧಿತ ಧಾತು
ಕಲಿ + ಇಸು = ಕಲಿಸು
ನಲಿ + ಇಸು = ನಲಿಸು
ಮಾಡು + ಇಸು = ಮಾಡಿಸು
ನಗು + ಇಸು = ನಗಿಸು
ಬರೆ + ಇಸು = ಬರೆಸು
ನಡೆ + ಇಸು = ನಡೆಸು
ಓಡು + ಇಸು = ಓಡಿಸು
ಹಾಡು + ಇಸು = ಹಾಡಿಸು
ಕರಗು + ಇಸು = ಕರಗಿಸು
(4) ಸಕರ್ಮಕ ಮತ್ತು (5) ಅಕರ್ಮಕ ಧಾತುಗಳು :
ರಾಮನು ಹಣ್ಣನ್ನು ತಿಂದನು. – ಈ ವಾಕ್ಯದಲ್ಲಿ ‘ರಾಮನು’ ಎಂಬುದು ‘ಕರ್ತೃಪದ’, ‘ಹಣ್ಣನ್ನು’ ಎಂಬುದು ‘ಕರ್ಮಪದ’, ‘ತಿಂದನು’ ಎಂಬುದು ‘ಕ್ರಿಯಾಪದ’ ಆಗಿದೆ. ರಾಮನು ಏನನ್ನು ತಿಂದನು? ಎಂದು ಪ್ರಶ್ನಿಸಿದರೆ ‘ಹಣ್ಣನ್ನು’ ಎಂಬ ಉತ್ತರ ಬರುತ್ತದೆ. ಹೀಗೆ ಕ್ರಿಯಾಪದವನ್ನು ಆಧಾರವಾಗಿಟ್ಟುಕೊಂಡು ಏನನ್ನು ಎಂದು ಪ್ರಶ್ನಿಸಿದಾಗ ಕರ್ಮಪದ ಬರಬೇಕು. ಆದರೆ ಕೆಲವು ಕ್ರಿಯಾಪದಗಳು ಕರ್ಮಪದ ಇಲ್ಲದೆ ಬಳಕೆಯಾಗುತ್ತವೆ.
ಉದಾ : ರಾಮನು ಓಡಿದನು. ಇಲ್ಲಿ ರಾಮನು ಏನನ್ನು ಓಡಿದನು ಎಂದು ಪ್ರಶ್ನಿಸಿದರೆ ಉತ್ತರ ಸಿಗುವುದಿಲ್ಲ. ಹೀಗಾಗಿ, ಕರ್ಮಪದವನ್ನು ಅಪೇಕ್ಷಿಸುವ ಧಾತುಗಳನ್ನು ‘ಸಕರ್ಮಕ ಧಾತುಗಳು’ ಎಂತಲೂ, ಕರ್ಮಪದವನ್ನು ಅಪೇಕ್ಷಿಸದ ಧಾತುಗಳನ್ನು ‘ಅಕರ್ಮಕ ಧಾತುಗಳು’ ಎಂತಲೂ ಕರೆಯಲಾಗುತ್ತದೆ. ಈ ಕೆಳಗಿನ ಉದಾಹರಣೆಗಳನ್ನು ಗಮನಿಸಿ.
(4) ಸಕರ್ಮಕ ಧಾತುಗಳು: ರಕ್ಷಿಸು, ಕಟ್ಟು, ಓದು, ಮಾಡು, ಉಣ್ಣು, ಕತ್ತರಿಸು, ತೆರೆ, ಸೇರು, ಬಿಡು
– ಈ ಎಲ್ಲಾ ಧಾತುಗಳ ಮುಂದೆ ‘ಏನನ್ನು’ ? ಯಾರನ್ನು? ಎಂದು ಎಂದು ಪ್ರಶ್ನೆ ಹಾಕಿಕೊಂಡರ ಯಾವುದಾದರೊಂದು (ಕರ್ಮಪದ) ಉತ್ತರ ನಿಗುತ್ತದ.
ನೀನು ಮರವನ್ನು ರಕ್ಕಿಸು. (ಏನನ್ನು? – ಮರವನ್ನು)
ಅವಳು ಮಾಲೆಯನ್ನು ಕಟ್ಟುತ್ತಿದ್ದಾಳೆ. (ಏನನ್ನು? – ಮಾಲೆಯನ್ನು)
ಅವರು ಊಟವನ್ನು ಮಾಡುತ್ತಿದ್ದಾರೆ. (ಏನನ್ನು? – ಊಟವನ್ನು)
ಅವನು ಮಾಂಸಾಹಾರವನ್ನು ಉಣ್ಣುತ್ತಿದ್ದಾನೆ. (ಏನನ್ನು? – ಮಾಂಸಾಹಾರವನ್ನು)
ದ್ರೋಹಿಗಳು ಮರವನ್ನು ಕತ್ತರಿಸುತ್ತಿದ್ದಾರೆ. (ಏನನ್ನು? – ಮರವನ್ನು)
ನೀವು ಬಾಗಿಲನ್ನು ತೆರೆಯಿರಿ. (ಏನನ್ನು? – ಬಾಗಿಲನ್ನು)
ನೀನು ಮನೆಯನ್ನು ಸೇರು. (ಏನನ್ನು? – ಮನೆಯನ್ನು)
ನೀನು ಅವರನ್ನು ಬಿಡು. (ಯಾರನ್ನು? – ಅವರನ್ನು)
(5) ಅಕರ್ಮಕ ಧಾತುಗಳು : ಮಲಗು, ಓಡು, ಹುಟ್ಟು, ಹೋಗು, ಏಳು, ಸೋರು, ನಾಚು – ಈ
ಎಲ್ಲಾ ಧಾತುಗಳ ಮುಂದೆ ‘ಏನನ್ನು’? ಯಾರನ್ನು? ಎಂದು ಪ್ರಶ್ನೆ ಹಾಕಿಕೊಂಡರೆ ಕರ್ಮಪದದ ಅಗತ್ಯ ಇರುವುದಿಲ್ಲ.
ಅವನು ಮಲಗಿದನು. (ಏನನ್ನು? ಉತ್ತರ: ——)
ಅವಳು ಓಡುತ್ತಿದ್ದಾಳೆ. (ಏನನ್ನು? ಉತ್ತರ: ——)
ಮಗು ಹುಟ್ಟಿತು. (ಏನನ್ನು? ಉತ್ತರ: ——)
ರಾಧಾ ಹೋಗುತ್ತಿದ್ದಾಳೆ. (ಏನನ್ನು? ಉತ್ತರ: ——)
ಕೋಡ ಸೋರುತ್ತಿದೆ. (ಏನನ್ನು? ಉತ್ತರ: ——)
ಕ್ರಿಯಾಪದಗಳಲ್ಲಿ ಇನ್ನೂ ಹಲವು ರೂಪಗಳಿವೆ. ಅವುಗಳನ್ನು ಈಗ ತಿಳಿಯೋಣ.
(6) ವಿಧ್ಯರ್ಥಕ (ವಿಧಿ + ಅರ್ಥ) ಕ್ರಿಯಾಪದ :
ಆಶೀರ್ವಾದ, ಅಪ್ಪಣೆ, ಆಜ್ಞೆ, ಹಾರೈಕೆ ಇವುಗಳನ್ನು ತೋರುವಾಗ ಧಾತುಗಳಿಗೆ ಆಖ್ಯಾತ ಪ್ರತ್ಯಯಗಳು
ಸೇರಿ ವಿಧ್ಯರ್ಥಕ ಕ್ರಿಯಾಪದಗಳು ಆಗುತ್ತವೆ.
ಉದಾ : ದೇವರು ನಿನಗೆ ಒಳ್ಳೆಯದು ಮಾಡಲಿ.
ಲಕ್ಷ್ಮೀ ಪಾಠವನ್ನು ಗಟ್ಟಿಯಾಗಿ ಓದಲಿ.
ಅವರಿಗೆ ಜಯವಾಗಲಿ.
ಅವನು ಹಾಳಾಗಿ ಹೋಗಲಿ.
(ದಪ್ಪಕ್ಷರಗಳಲ್ಲಿ ಅಡಿಗೆರೆದಿರುವ ಪದಗಳು ವಿಧ್ಯರ್ಥಕ ಕ್ರಿಯಾಪದಗಳು.)
(7) ನಿಷೇಧಾರ್ಥಕ ಕ್ರಿಯಾಪದಗಳು :
ಕ್ರಿಯೆಯು ನಡೆಯಲಿಲ್ಲ ಎಂಬರ್ಥ ತೋರುವಾಗ ಧಾತುಗಳ ಮೇಲೆ ಆಖ್ಯಾತ ಪ್ರತ್ಯಯಗಳು
ಸೇರಿದಾಗ ನಿಷೇಧಾರ್ಥಕ ಕ್ರಿಯಾಪದಗಳು ಉಂಟಾಗುತ್ತವೆ.
ಉದಾ : ಅವನು ಅನ್ನವನ್ನು ತಿನ್ನನು.
ಅವರು ಊರಿಂದ ಇಂದು ಬಾರರು.
ಅವಳು ನನ್ನ ಮಾತು ಕೇಳಳು.
(ದಪ್ಪಕ್ಷರಗಳಲ್ಲಿ ಅಡಿಗೆರೆದಿರುವ ಪದಗಳು ನಿಷೇಧಾರ್ಥಕ ಕ್ರಿಯಾಪದಗಳು.)
(8) ಸಂಭಾವನಾರ್ಥಕ ಕ್ರಿಯಾಪದಗಳು :
ಕ್ರಿಯೆಯು ನಡೆಯುವಿಕೆಯಲ್ಲಿ ‘ಸಂಶಯ’ ಅಥವಾ ‘ಊಹೆ’ ತೋರುವಲ್ಲಿ ಧಾತುಗಳ ಮೇಲೆ
ಆಖ್ಯಾತ ಪ್ರತ್ಯಯಗಳು ಸೇರಿದಾಗ ಸಂಭಾವನಾರ್ಥಕ ಕ್ರಿಯಾಪದಗಳೆನಿಸುತ್ತವೆ.
ಉದಾ : ಅವನು ನಾಳೆ ಬಂದಾನು.
ಚಿನ್ನದ ಬೆಲೆ ಮೇಲಕ್ಕೆ ಏರೀತು
ಅನ್ನವನ್ನು ಆತ ತಿಂದಾನು.
ಅವನು ಪರೀಕ್ಷೆಯಲ್ಲಿ ಪಾಸು ಆದಾನು.
(ದಪ್ಪಕ್ಷರಗಳಲ್ಲಿ ಅಡಿಗೆರೆದಿರುವ ಪದಗಳು ಸಂಭಾವನಾರ್ಥಕ ಕ್ರಿಯಾಪದಗಳು.)
ಕ್ರಿಯಾಪದ ಎಂದರೇನು?
ಕರ್ತೃವಿನ ಕ್ರಿಯೆಯನ್ನು ತಿಳಿಸುವ ಪದವನ್ನು ಕ್ರಿಯಾಪದ ಎನ್ನುವರು.
ಕ್ರಿಯಾರ್ಥವನ್ನು ಕೊಡುವುದಾಗಿಯೂ, ಪ್ರತ್ಯಯವನ್ನು ಹೊಂದದೆಯೂ ಇರುವ ಶಬ್ದಕ್ಕೆ ಕ್ರಿಯಾಪ್ರಕೃತಿ ಅಥವಾ ಧಾತು ಎನ್ನುವರು.
ಕೃದಂತಗಳು
ನಮ್ಮ ಮಾತುಗಳಲ್ಲಿ ಮಾಡಿದ, ಹೋಗುವ, ಬರೆಯುವ ಮುಂತಾದ ಪದಗಳನ್ನು ಬಳಸುತ್ತೇವೆ. ಇಲ್ಲಿ ಮಾಡಿದ ಎಂಬ ಪದವನ್ನು ಬಿಡಿಸಿದಾಗ ಮಾಡು+ದ+ಅ ಹಾಗೆಯೇ ‘ಹೋಗುವ’ ಪದದಲ್ಲಿ ಹೋಗು+ವ+ಅ, ‘ಬರೆಯುವ’ ಪದದಲ್ಲಿ ಬರೆ+ಉವ+ಅ ಎಂಬ ¨ ಎಂಬ ಭಾಗಗಳನ್ನು ನೋಡಬಹುದು ಇಲ್ಲಿ ಮೊದಲನೆಯದು ‘ಧಾತು’ ಎಂತಲೂ ಎರಡನೆಯದು ಮೂರನೆಯದು ಪ್ರತ್ಯಯಗಳೆಂತಲೂ ಕರೆಯಲ್ಪಡುತ್ತವೆ. ಧಾತುಗಳಿಗೆ ಈ ಪ್ರತ್ಯಯಗಳು ಸೇರದ ರೂಪವನ್ನು ನಾಮಪ್ರಕೃತಿಗಳೆಂದು ಕರೆಯುತ್ತಾರೆ. ಇವುಗಳನ್ನು ಕೃದಂತನಾಮಪ್ರಕೃತಿಗಳೆಂದು ಕರೆಯಲಾಗುವುದು. ಈ ಕೃದಂತ ನಾಮಪ್ರಕೃತಿಗಳಿಗೆ ವಿಭಕ್ತಿ ಪ್ರತ್ಯಯಗಳನ್ನು ಸೇರಿಸಿದಾಗ ಅವುಗಳು ಕೃದಂತನಾಮ ಪದಗಳೆನಿಸುತ್ತವೆ. ಈ ಉದಾಹರಣೆಗಳ ಕೊನೆಯಲ್ಲಿರುವ ‘ಅ’ ಎಂಬುದೇ ಕೃತ್‌ಪ್ರತ್ಯಯ.
– ಕೃದಂತ ಪದಗಳು ಎಂದಿಗೂ ಕ್ರಿಯೆಯನ್ನು ಪೂರ್ಣಗೊಳಿಸುವುದಿಲ್ಲ. ಅಂದರೆ ಕ್ರಿಯೆಯು ಅಪೂರ್ಣವಾಗಿರುವಂತ ಪದವಾಗಿರುತ್ತದೆ.
ಸೂತ್ರ : ಧಾತುಗಳಿಗೆ ಕೃತ್‌ಪ್ರತ್ಯಯಗಳು ಸೇರಿ ಕೃದಂತಗಳೆನಿಸುತ್ತವೆ. ಇದಕ್ಕೆ ಕೃನ್ನಾಮಗಳೆಂಬ ಹೆಸರೂ ಇದೆ.
ಕೃದಂತಗಳಲ್ಲಿ ಮೂರು ವಿಧಗಳಿವೆ. 1. ಕೃದಂತನಾಮ 2. ಕೃದಂತಭಾವನಾಮ 3. ಕೃದಂತಾವ್ಯಯ
ಕೃದಂತನಾಮ ಕೃದಂತಭಾವನಾಮ ಕೃದಂತಾವ್ಯಯ
ಮಾಡಿದ ಮಾಟ ಮಾಡಿ
ತಿನ್ನುವ ತಿನ್ನುವಿಕೆ ತಿಂದು
ನಡೆಯುವ ನಡೆತ ನಡೆಯುತ್ತ
ಓಡಿದ ಓಟ ಓಡಿ
ಕೃದಂತನಾಮಗಳು : – ಧಾತುಗಳಿಗೆ ಕರ್ತೃ ಮೊದಲಾದ ಅರ್ಥದಲ್ಲಿ ಸಾಮಾನ್ಯವಾಗಿ ‘ಅ’ ಎಂಬ ಕೃತ್‌ಪ್ರತ್ಯಯ ಬರುವುದು. ಧಾತುವಿಗೂ ಕೃತ್ ಪ್ರತ್ಯಯಕ್ಕೂ ಮಧ್ಯದಲ್ಲಿ ಕಾಲಸೂಚಕ ಪ್ರತ್ಯಯಗಳು ಸೇರಿಕೊಳ್ಳುತ್ತವೆ. ಇವುಗಳನ್ನೇ ಕೃದಂತನಾಮಗಳೆನ್ನುವರು.
ಉದಾ :
ವರ್ತಮಾನಕೃದಂತಕ್ಕೆ :
ಓಡು+ವ+ಅ = ಓಡುವ
ಬಾಳು+ವ+ಅ = ಬಾಳುವ
ಬರೆ+ಉವ+ಅ = ಬರೆಯುವ
ಭೂತಕಾಲಕ್ಕೆ :
ಓಡು+ದ+ಅ = ಓಡಿದ
ಬಾಳು+ದ+ಅ = ಬಾಳಿದ
ಬರೆ+ದ+ಅ = ಬರೆದ
ನಿಷೇಧ ಕೃದಂತಕ್ಕೆ:
ಓಡು+ಅದ+ಅ = ಓಡದ
ಬಾಳು+ಅದ+ಅ = ಬಾಳದ
ಬರೆ+ಅದ+ಅ = ಬರೆಯದ
ಇವುಗಳಿಗೆ ವಿಭಕ್ತಿ ಪ್ರತ್ಯಯಗಳನ್ನು ಸೇರಿಸಿದಾಗ ಲಿಂಗಗಳಿಗನುಗುಣವಾಗಿ ಆಗುವ ಬದಲಾವಣೆಗಳನ್ನು
ಗಮನಿಸಿ.
ಓಡುವ+ಅವನು+ಉ = ಓಡುವವನು
ಓಡುವ+ಅವನು+ಇಂದ = ಓಡುವವನಿಂದ
ಓಡುವ+ಅವಳು+ಅಲ್ಲಿ = ಓಡುವವಳಲ್ಲಿ
ಓಡುವ+ಉದು+ಅನ್ನು = ಓಡುವುದನ್ನು
ಪುಲ್ಲಿಂಗದಲ್ಲಿ ಕೃದಂತ + ನಾಮವಿಭಕ್ತಿ ಪ್ರತ್ಯಯಗಳ ಬಳಕೆ:-
ಹೋಗು + ಅವನು + ಉ = ಹೋಗುವನು
ಹೋಗು + ಅವರು + ಉ = ಹೋಗುವರು
ಹೋಗು + ಅವನು + ಅನ್ನು = ಹೋಗುವವನನ್ನು
ಹೋಗು + ಅವರು + ಅನ್ನು = ಹೋಗುವವರನ್ನು
ಹೋಗು + ಅವನು + ಇಂದ = ಹೋಗುವವನಿಂದ
ಹೋಗು + ಅವರು + ಇಂದ = ಹೋಗುವವರಿಂದ
ಹೋಗು + ಅವನು + ಗೆ = ಹೋಗುವವನಿಗೆ
ಹೋಗು + ಅವರು + ಗೆ = ಹೋಗುವವರಿಗೆ
ಹೀಗೆ ವಿಭಕ್ತಿ ಪ್ರತ್ಯಯಗಳನ್ನು ಮುಂದುವರಿಸಬಹುದು.
ಸ್ತ್ರೀಲಿಂಗದಲ್ಲಿ ಕೃದಂತ + ನಾಮವಿಭಕ್ತಿ ಪ್ರತ್ಯಯಗಳ ಬಳಕೆ:-
ಹೋಗು + ಅವಳು + ಉ = ಹೋಗುವಳು
ಹೋಗು + ಅವರು + ಉ = ಹೋಗುವರು
ಹೋಗು + ಅವಳು + ಅನ್ನು = ಹೋಗುವವಳನ್ನು
ಹೋಗು + ಅವರು + ಅನ್ನು = ಹೋಗುವವರನ್ನು
ಹೋಗು + ಅವಳು + ಇಂದ = ಹೋಗುವವಳಿಂದ
ಹೋಗು + ಅವರು + ಇಂದ = ಹೋಗುವವರಿಂದ
ಹೋಗು + ಅವಳು + ಗೆ = ಹೋಗುವವಳಿಗೆ
ಹೋಗು + ಅವರು + ಗೆ = ಹೋಗುವವರಿಗೆ
ಹೀಗೆ ವಿಭಕ್ತಿ ಪ್ರತ್ಯಯಗಳನ್ನು ಮುಂದುವರಿಸಬಹುದು.
ಸೂತ್ರ :- ಧಾತುಗಳ ಮೇಲೆ ಭಾವಾರ್ಥದಲ್ಲಿ ಕೃತ್ ಪ್ರತ್ಯಯಗಳು ಸೇರಿದಾಗ ಕೃದಂತ ಭಾವನಾಮಗಳಾಗುತ್ತವೆ.
ಕೃದಂತಭಾವನಾಮ :
ಈ ವಾಕ್ಯಗಳನ್ನು ಗಮನಿಸಿ.
– ಆತನ ಓಟ ಚೆನ್ನಾಗಿತ್ತು
– ಗಡಿಗೆಯ ಮಾಟ ಸೊಗಸಾಗಿದೆ
– ಅದರ ನೆನಪು ಇಲ್ಲ
– ಇದರ ಕೊರೆತ ಹಸನಾಗಿದೆ.
ಈ ವಾಕ್ಯಗಳಲ್ಲಿ ಗೆರೆ ಎಳೆದಿರುವ ಪದಗಳು ವಿಶೇಷ ರೀತಿಯ ಅರ್ಥಗಳನ್ನು ನೀಡುತ್ತವೆ.
– ಓಡುವ ರೀತಿಯೇ – ಓಟ – ಓಡು + ಟ
– ಮಾಡಿರುವ ರೀತಿಯೇ – ಮಾಟ – ಮಾಡು + ಟ
– ನೆನೆಯುವ ರೀತಿಯೇ – ನೆನಪು – ನೆನೆ + ಪು
– ಕೊರೆದಿರುವಿಕೆಯೇ – ಕೊರೆತ – ಕೊರೆ + ತ
ಇವೆಲ್ಲವೂ ಕ್ರಿಯೆಯ ಭಾವವನ್ನು ತಿಳಿಸುವುದರಿಂದ ಇವುಗಳನ್ನು ಕೃದಂತ ಭಾವನಾಮ ಎಂದು ಕರೆಯಲಾಗುತ್ತದೆ. ಇವುಗಳನ್ನು ಭಾವಕೃದಂತಗಳೆಂದೂ ಕರೆಯುವ ರೂಢಿ ಇದೆ.
ಉದಾ :-
ಧಾತು ಭಾವಾರ್ಥದಲ್ಲಿ ಕೃದಂತ ಇತರ ಕೃತ್‌ಪ್ರತ್ಯಯ ಭಾವನಾಮ ರೂಪಗಳು
ಓಡು ಟ ಓಟ ನೋಟ
ಬಾಳು ವಿಕೆ ಬಾಳುವಿಕೆ ಬರೆಯುವಿಕೆ
ಅಂಜು ಇಕೆ ಅಂಜಿಕೆ ನಂಬಿಕೆ
ಉಡು ಗೆ ಉಡುಗೆ ತೊಡುಗೆ
ನಗು ಉದು ನಗುವುದು ತಿನ್ನುವುದು
ಹೀಗೆ… ಉದು, ವಿಕೆ, ಇಕೆ, ಇಗೆ, ಅವು, ವು, ತ, ಟ, ವಳಿ, ಪು, ಅಲು, ಎ, ಅಕೆ, ವಳಿಕೆ, ವಣಿಗೆ ಎಂಬ ಕೃತ್‌ಪ್ರತ್ಯಯಗಳು ಭಾವಾರ್ಥದಲ್ಲಿ ಧಾತುಗಳಿಗೆ ಸೇರುವ ಮೂಲಕ ಕೃದಂತ ಭಾವನಾಮಗಳಾಗುತ್ತವೆ.
ಅಂಜು + ಇಕೆ (ಅಂಜುವುದರ ಭಾವ) = ಅಂಜಿಕೆ
ನಂಬು + ಇಕೆ (ನಂಬುವುದರ ಭಾವ) = ನಂಬಿಕೆ
ತಿನ್ನು + ಇಕೆ (ತಿನ್ನುವುದರ ಭಾವ) = ತಿನ್ನುವಿಕೆ
ಬಾಳು + ವಿಕೆ (ಬಾಳುವುದರ ಭಾವ) = ಬಾಳುವಿಕೆ
ಬರೆ + ವಿಕೆ (ಬರೆಯುವುದರ ಭಾವ) = ಬರೆಯುವಿಕೆ
ಉಡು + ಗೆ (ಉಡುವುದರ ಭಾವ) = ಉಡುಗೆ
ತೊಡು + ಗೆ (ತೊಡುವುದರ ಭಾವ) = ತೊಡುಗೆ
ಓಡು + ಟ (ಓಡುವುದರ ಭಾವ) = ಓಟ
ನೋಡು + ಟ (ನೋಡುವುದರ ಭಾವ) = ನೋಟ
ಮಾಡು + ಟ (ಮಾಡುವುದರ ಭಾವ) = ಮಾಟ
ನಗು + ವುದು (ನಗುವುದರ ಭಾವ) = ನಗುವುದು
ತಿನ್ನು + ವುದು (ತಿನ್ನುವುದರ ಭಾವ) = ತಿನ್ನುವುದು
ದಣಿ + ವು (ದಣಿಯುವುದರ ಭಾವ) = ದಣಿವು
ಕೊರೆ + ತ (ಕೊರೆಯುವುದರ ಭಾವ) = ಕೊರೆತ
ನಡೆ + ಅತೆ (ನಡೆಯುವುದರ ಭಾವ) = ನಡತೆ
ಅಳೆ + ತೆ (ಅಳೆಯುವುದರ ಭಾವ) = ಅಳೆತೆ
ಒಪ್ಪು + ಇತ (ಒಪ್ಪುವುದರ ಭಾವ) = ಒಪ್ಪಿತ
ನೆನೆ + ಪು (ನೆನೆಯುವುದರ ಭಾವ) = ನೆನೆಪು
ಮೊಳೆ + ಕೆ (ಮೊಳೆಯುವುದರ ಭಾವ) = ಮೊಳೆಕೆ
ಸಲು + ವಳಿ (ಸಲುವುದರ ಭಾವ) = ಸಲುವಳಿ
ತಿಳಿ + ವಳಿಕೆ (ತಿಳಿಯುವುದರ ಭಾವ) = ತಿಳಿವಳಿಕೆ
ಮೆರೆ + ವಣಿಗೆ(ಮೆರೆಯುವುದರ ಭಾವ) = ಮೆರೆವಣಿಗೆ
ಸೂತ್ರ :- ಧಾತುಗಳ ಮೇಲೆ ಉತ್ತ, ಅದೆ, ದರೆ, ಅಲು, ಅಲಿಕೆ, ಅ, ಇ, ದು ಇತ್ಯಾದಿ ಪ್ರತ್ಯಯಗಳು ಸೇರಿ
ಕೃದಂತಾವ್ಯಯಗಳಾಗುತ್ತವೆ.
ಕೃದಂತಾವ್ಯಯಗಳು
ಧಾತುಗಳಿಂದ ಹುಟ್ಟಿ ಅವ್ಯಯದ ಗುಣವನ್ನು ಪಡೆದಂತಹ ಪದಗಳನ್ನು ಕೃದಂತಾವ್ಯಯಗಳು ಅಥವಾ
ಅವ್ಯಯಕೃದಂತಗಳೆಂದು ಕರೆಯಲಾಗುತ್ತದೆ.
ಉದಾ :- ಉಣ್ಣದೆ, ಬರುತ್ತ, ಬರೆದು, ಹೋಗಲಿಕ್ಕೆ.
ಉದಾ :- ಮಾಡು + ಉತ್ತ = ಮಾಡುತ್ತ
ಮಾಡು + ಅದೆ = ಮಾಡದೆ
ಮಾಡು + ಅಲು = ಮಾಡಲು
ಮಾಡು + ಅಲಿಕ್ಕೆ = ಮಾಡಲಿಕ್ಕೆ
ಮಾಡು + ಅ = ಮಾಡ
ಮಾಡು + ಇ = ಮಾಡಿ
ಬರೆ + ದು = ಬರೆದು
ಪ್ರತ್ಯಯಗಳು ಧಾತು ಪ್ರತ್ಯಯ ಕೃದಂತಾವ್ಯಯ
ಉತ ನೋಡು + ಉತ ನೋಡುತ
ಇದರಂತೆ
ಮಾಡುತ
ಹಾಡುತ
ಉತ್ತ ನೋಡು + ಉತ್ತ ನೋಡುತ್ತ
ಮಾಡುತ್ತ
ನಡೆಯುತ್ತ
ಅದೆ ನೋಡು + ಅದೆ ನೋಡದೆ
ಮಾಡದೆ
ಹಾಡದೆ
ದರೆ ತಿನ್ನು + ದರೆ ತಿಂದರೆ
ಕೊಂದರೆ
ಬಂದರೆ
ಅಲು ನೋಡು + ಅಲು ನೋಡಲು
ಮಾಡಲು
ಹಾಡಲು
ಅಲಿಕ್ಕೆ ನೋಡು +ಅಲಿಕ್ಕೆ ನೋಡಲಿಕ್ಕೆ
ಮಾಡಲಿಕ್ಕೆ
ಹಾಡಲಿಕ್ಕೆ
ಅ ನೋಡು + ಅ ನೋಡ
ಮಾಡ
ಹಾಡ
ಇ ನೋಡು + ಇ ನೋಡಿ
ಮಾಡಿ
ಹಾಡಿ
ದು ಬರು +ದು ಬಂದು
ಕರೆದು
ಕುಡಿದು
ತದ್ಧಿತಾಂತಗಳು
ಈ ಅಧ್ಯಾಯದಲ್ಲಿ ತದ್ಧಿತಾಂತ, ತದ್ಧಿತಾಂತದ ಪ್ರಕಾರಗಳು ಹಾಗೂ ತದ್ಧಿತಾಂತ & ಕೃದಂತದ ನಡುವಿನ ವ್ಯತ್ಯಾಸದೊಂದಿಗೆ ಈ ಕೆಳಗಿನ ಪರಿವಿಡಿಯಂತೆ ಉದಾಹರಣೆಗಳ ಜೊತೆಗೆ ಕಲಿಯೋಣ ಬನ್ನಿ.
– ತದ್ಧಿತಾಂತಗಳು – ತದ್ಧಿತಾಂತ ಎಂದರೇನು?
– ತದ್ಧಿತಾಂತ & ಕೃದಂತದ ನಡುವಿನ ವ್ಯತ್ಯಾಸ
– ತದ್ಧಿತ ಪ್ರತ್ಯಯಗಳಲ್ಲಿ 3 ವಿಧಗಳು
– (1) ತದ್ಧಿತಾಂತ ನಾಮ:
– (2) ತದ್ಧಿತಾಂತ ಭಾವನಾಮಗಳು:
– (3) ತದ್ಧಿತಾಂತ ಅವ್ಯಯಗಳು:
ತದ್ಧಿತಾಂತ ಎಂದರೇನು?
ತದ್ಧಿತಾಂತಗಳು (ತದ್ಧಿತ + ಅಂತ)
ನಾಮಪದಗಳ ಮೇಲೆ ಬೇರೆ ಬೇರೆ ಅರ್ಥಗಳಲ್ಲಿ ಗಾರ, ಕಾರ, ಇಗ, ಆಡಿಗ, ವಂತ, ವಳ, ಇಕ, ಆಳಿ-ಇತ್ಯಾದಿ ತದ್ಧಿತ ಪ್ರತ್ಯಯಗಳು ಸೇರಿ ಆಗುವ ಶಬ್ದವನ್ನ್ನು ‘ತದ್ಧಿತಾಂತ’ ಎನ್ನುವರು.
ಉದಾ: ಕನ್ನಡವನ್ನು ತಿಳಿದವನು ಬಂದನು.
ಈ ವಾಕ್ಯದಲ್ಲಿ ಇರುವ ಕನ್ನಡವನ್ನು ಎಂಬ ಪದದ ಮುಂದೆ ಬಲ್ಲವನು ಎಂಬ ಅರ್ಥದಲ್ಲಿ ಇಗ ಎಂಬ ಪ್ರತ್ಯಯವನ್ನು ಸೇರಿಸಿ ಕನ್ನಡಿಗ ಎಂಬ ಪದವನ್ನು ಮಾಡಬಹುದು. ಅಂದರೆ ಕನ್ನಡವನ್ನು + (ತಿಳಿದವನು) + ಇಗ = ಕನ್ನಡಿಗ ಎಂಬ ರೀತಿಯಲ್ಲಿ ಪದರಚನೆಯಾಗುತ್ತದೆ. ಒಂದು ಪ್ರಕೃತಿ ಪದಕ್ಕೆ ಎರಡು ಪ್ರತ್ಯಯವನ್ನು ಸೇರಿಸುವ ಕ್ರಮವಿಲ್ಲ.
ಹಾಗಾಗಿ ಕನ್ನಡ ಎಂಬ ಪ್ರಕೃತಿ ಪದದ ಜೊತೆಗೆ ಇದ್ದ ಅನ್ನು ಎಂಬ ಪ್ರತ್ಯಯವನ್ನು ತೆಗೆದು ಇಗ ಎಂಬ ತದ್ಧಿತ ಪ್ರತ್ಯಯವನ್ನು ಮಾತ್ರ ಉಳಿಸಿಕೊಂಡು ಕನ್ನಡಿಗ ಎಂಬ ತದ್ಧಿತಾಂತ ಪದರಚನೆ ಮಾಡಲಾಗುವುದು.
ಈ ತದ್ಧಿತ ಪ್ರತ್ಯಯಗಳು ಸೇರುವಾಗ ಮಧ್ಯದ ವಿಭಕ್ತಿ ಪ್ರತ್ಯಯವು ಲೋಪವಾಗುವುದು.
ತದ್ಧಿತಾಂತ & ಕೃದಂತದ ನಡುವಿನ ವ್ಯತ್ಯಾಸ
– ಕೃದಂತವು ಕ್ರಿಯಾಪಕೃತಿಯಿಂದ ರಚನೆಯಾಗುತ್ತದೆ ಆದರೆ ಅದು ಎಂದಿಗೂ ಪೂರ್ಣ ಕ್ರಿಯಾಪದವಾಗುವುದಿಲ್ಲ.
– ತದ್ಧಿತಾಂತವು ನಾಮಪಕೃತಿಯಿಂದ ರಚನೆಯಾಗುತ್ತದೆ
– ವ್ಯಕ್ತಿಯಲ್ಲಿ ಶಾಶ್ವತವಾಗಿ ಇರುವಂತಹ ಭಾವವೇ ತದ್ಧಿತಾಂತ ಭಾವನಾಮ.
– ವ್ಯಕ್ತಿಯಲ್ಲಿ ಹಾಗೆ ಬಂದು ಹೀಗೆ ಹೋಗುವ ಭಾವವೇ ಕೃದಂತ ಭಾವನಾಮ.
ಪ್ರಾತಿಪದಿಕದ (ನಾಮಪ್ರಕೃತಿ) ಮೇಲೆ ವಿಭಕ್ತಿ ಪ್ರತ್ಯಯವು ಸೇರಿ ನಾಮಪದವಾಗುತ್ತದೆ. ಈ ನಾಮಪದದ ಮೇಲೆ ಬೇರೆ ಬೇರೆ ಅರ್ಥದಲ್ಲಿ ಮತ್ತೆ ಕೆಲವು ಪ್ರತ್ಯಯಗಳು ಬರುತ್ತವೆ. ಇವುಗಳನ್ನು ತದ್ಧಿತವೆಂದು ಹೆಸರು. ಈ ಪ್ರತ್ಯಯಗಳು ಅಂತ್ಯದಲ್ಲಿ ಬರುವುದರಿಂದ ಇವುಗಳಿಗೆ ತದ್ಧಿತಾಂತ ಪ್ರತ್ಯಯಗಳೆಂದು ಕರೆಯುತ್ತಾರೆ.
ತದ್ಧಿತಾಂತ ಪ್ರತ್ಯಗಳಲ್ಲಿ ಸ್ತ್ರೀಲಿಂಗ ಮತ್ತು ಪುಲ್ಲಿಂಗಗಳಿಗೆ ಪ್ರತ್ಯೇಕವಾದ ತದ್ಧಿತ ಪ್ರತ್ಯಯಗಳನ್ನು ಬಳಸಲಾಗುವುದು.
ಉದಾ:
ಹಣವಂತ – ಹಣವಂತೆ
ಹೂವಾಡಿಗ – ಹೂವಾಡಗಿತ್ತಿ
ಅರಸ – ಅರಸಿ
ಯಜಮಾನ – ಯಜಮಾನಿ
ಒಕ್ಕಲಿಗ – ಒಕ್ಕಲತಿ
ತದ್ಧಿತ ಪ್ರತ್ಯಯಗಳಲ್ಲಿ 3 ವಿಧಗಳು
(1) ತದ್ಧಿತಾಂತ ನಾಮ
(2) ತದ್ಧಿತಾಂತ ಭಾವನಾಮ
(3) ತದ್ಧಿತಾಂತಾವ್ಯಯ
(1) ತದ್ಧಿತಾಂತ ನಾಮ:
ನಾಮ ಪ್ರಕೃತಿಗಳಿಗೆ ಬೇರೆಬೇರೆ ಅರ್ಥದಲ್ಲಿ ~ಇಗ, ~ಇಕ, ~ಆಡಿಗ, ~ಕಾರ, ~ಕೋರ, ~ಗಾರ, ~ವಂತ, ~ವಾಳ, ~ವಳ, ~ಆಳಿ, ~ಗುಳಿ, ~ಆರ, ~ಅನೆಯ ಮೊದಲಾದ ತದ್ಧಿತ ಪ್ರತ್ಯಯಗಳು ಸೇರಿ ಆಗುವ ಶಬ್ದಗಳನ್ನು ‘ತದ್ಧಿತಾಂತನಾಮ’ ಎನ್ನುವರು.
ತದ್ಧಿತಾಂತ ನಾಮ
ಅರ್ಥ ನಾಮಪ್ರಕೃತಿ ತದ್ಧಿತ ಪ್ರತ್ಯಯ ತದ್ಧಿತಾಂತ ನಾಮ
ಕನ್ನಡವನ್ನು ತಿಳಿದವನು ಕನ್ನಡ ಇಗ ಕನ್ನಡಿಗ
ಚೆನ್ನಾಗಿ ಕಾಣುವವನು ಚೆನ್ನ ಇಗ ಚೆನ್ನಿಗ
ಕೇಡನ್ನು ಮಾಡುವವನು ಕೇಡು ಇಗ ಕೇಡಿಗ
ಗಾಣವನ್ನು ಆಡಿಸುವವನು ಗಾಣ ಇಗ ಗಾಣಿಗ
ಲೇಕ್ಕವನ್ನು ಮಾಡುವವನು ಲೆಕ್ಕ ಇಗ ಲೆಕ್ಕಿಗ
ಗಂಧವನ್ನು ಮಾರುವವನು ಗಂಧ ಇಗ ಗಂಧಿಗ
ನಾವೆಯನ್ನು ನಡೆಸುವವನು ನಾವಿಕ ನಾವೆ ಇಕ ನಾವಿಕ
ಪ್ರಮಾಣವನ್ನು ಉಳ್ಳವನು ಪ್ರಮಾಣ ಇಕ ಪ್ರಾಮಾಣಿಕ
ಹೂವನ್ನು ಮಾರುವವನು ಹೂವು ಆಡಿಗ ಹೂವಾಡಿಗ
ಹಾವನ್ನು ಆಡಿಸುವವನು ಹಾವು ಆಡಿಗ ಹಾವಾಡಿಗ
ಕೈದನ್ನು ಹಿಡಿದಿರುವವನು ಕೈದು ಕಾರ ಕೈದುಕಾರ
ಕೋಲನ್ನು ಹಿಡಿಯುವವನು ಕೋಲು ಕಾರ ಕೋಲುಕಾರ
ಓಲೆಯನ್ನು ತರುವವನು ಓಲೆ ಕಾರ ಓಲೆಕಾರ
ಬಳೆಯನ್ನು ಮಾರುವವನು ಬಳೆ ಗಾರ ಬಳೆಗಾರ
ಬೇಟೆಯನ್ನು ಆಡುವವನು ಬೇಟೆ ಗಾರ ಬೇಟೆಗಾರ
ಛಲವನ್ನು ಉಳ್ಳವನು ಛಲ ಗಾರ ಛಲಗಾರ
ಮೋಸವನ್ನು ಮಾಡುವವನು ಮೋಸ ಗಾರ ಮೋಸಗಾರ
ಕೊಲೆಯನ್ನು ಮಾಡುವವನು ಕೊಲೆ ಗಾರ ಕೊಲೆಗಾರ
ಸಾಲವನ್ನು ಪಡೆದವನು ಸಾಲ ಗಾರ ಸಾಲಗಾರ
ಪಾಲನ್ನು ಮಾಡುವವನು ಪಾಲು ಗಾರ ಪಾಲುಗಾರ
ಮಾತನ್ನು ಆಡುವವನು ಮಾತು ಗಾರ ಮಾತುಗಾರ
ಬುದ್ಧಿಯನ್ನು ಉಳ್ಳವನು ಬುದ್ಧಿ ವಂತ ಬುದ್ಧಿವಂತ
ಹಣವನ್ನು ಉಳ್ಳವನು ಹಣ ವಂತ ಹಣವಂತ
ಧನವನ್ನು ಉಳ್ಳವನು ಧನ ವಂತ ಧನವಂತ
ಸಿರಿಯನ್ನು ಉಳ್ಳವನು ಸಿರಿ ವಂತ ಸಿರಿವಂತ
ಗುಣವನ್ನು ಉಳ್ಳವನು ಗುಣ ವಂತ ಗುಣವಂತ
ರೂಪವನ್ನು ಉಳ್ಳವನು ರೂಪ ವಂತ ರೂಪವಂತ
ಕರಿಯ ಬಣ್ಣವನ್ನು ಉಳ್ಳುವನು ಕರಿ ಇಕ ಕರಿಕ
ಬಿಳಿಯ ಬಣ್ಣವನ್ನು ಉಳ್ಳುವನು ಬಿಳಿ ಇಕ ಬಿಳಿಕ
ಮಡಿಯನ್ನು ಮಾಡುವವನು ಮಡಿ ವಳ ಮಡಿವಳ
ಸಜ್ಜೆಯನ್ನು ಸಿದ್ಧಪಡಿಸುವವನು ಸಜ್ಜೆ ವಳ ಸಜ್ಜೆವಳ
ಓದನ್ನು ಹೆಚ್ಚು ಆಚರಿಸುವವನು ಓದು ಆಳಿ ಓದಾಳಿ
ಜೂಜನ್ನು ಆಡುವವನು ಜೂಜು ಆಳಿ ಜೂದಾಳಿ
ಅತಿ ಹೆಚ್ಚು ಮಾತನ್ನು ಆಡುವವನು ವಾಚ ಆಳಿ ವಾಚಾಳಿ
ಅತಿ ಹೆಚ್ಚು ಮಾತನ್ನು ಆಡುವವನು ಮಾತು ಆಳಿ ಮಾತಾಳಿ
ಲಂಚವನ್ನು ತೆಗೆದುಕೊಳ್ಳುವವನು ಲಂಚ ಗುಳಿ ಲಂಚಗುಳಿ
ಕಬ್ಬಿಣದ ಕೆಲಸಮಾಡುವವನು ಕಮ್ಮ ಆರ ಕಮ್ಮಾರ
ಕುಂಭವನ್ನು ಮಾಡುವವನು ಕುಂಭ ಆರ ಕುಂಬಾರ
ಒಂದು ಸಂಖ್ಯೆಯುಳ್ಳದ್ದು ಒಂದು ಅನೆಯ ಒಂದನೆಯ
ಎರಡು ಸಂಖ್ಯೆಯುಳ್ಳದ್ದು ಎರಡು ಅನೆಯ ಎರಡನೆಯ
ಚಾಡಿಯನ್ನು ಹೇಳುವವನು ಚಾಡಿ ಕೋರ ಚಾಡಿಕೋರ
ಲಂಚವನ್ನು ಪಡೆಯುವವನು ಲಂಚ ಕೋರ ಲಂಚಕೋರ
ಪ್ರಾತಿಪದಿಕದ (ನಾಮಪ್ರಕೃತಿ) ಮೇಲೆ ವಿಭಕ್ತಿ ಪ್ರತ್ಯಯವು ಸೇರಿ ನಾಮಪದವಾಗುತ್ತದೆ. ಈ ನಾಮಪದದ ಮೇಲೆ ಬೇರೆ ಬೇರೆ ಅರ್ಥದಲ್ಲಿ ಮತ್ತೆ ಕೆಲವು ಪ್ರತ್ಯಯಗಳು ಬರುತ್ತವೆ. ಇವುಗಳನ್ನು ತದ್ಧಿತವೆಂದು ಹೆಸರು. ಈ ಪ್ರತ್ಯಯಗಳು ಅಂತ್ಯದಲ್ಲಿ ಬರುವುದರಿಂದ ಇವುಗಳಿಗೆ ತದ್ಧಿತಾಂತ ಪ್ರತ್ಯಯಗಳೆಂದು ಕರೆಯುತ್ತಾರೆ.
ಸ್ತ್ರೀಲಿಂಗದಲ್ಲಿ ಬರುವ ತದ್ಧಿತ ಪ್ರತ್ಯಯಗಳು
ಸ್ತ್ರೀಲಿಂಗದಲ್ಲಿ ಇತಿ, ಇತ್ತಿ, ಗಿತ್ತಿ, ತಿ, ಇ, ಎ ಇತ್ಯಾದಿ ತದ್ಧಿತ ಪ್ರತ್ಯಯಗಳು ನಾಮಪದದ ಜೊತೆಗೆ ಸೇರಿದಾಗ ತದ್ಧಿತಾಂತಗಳು.
ಪುಲ್ಲಿಂಗ ರೂಪ ಸ್ತ್ರೀವಾಚಕ ತದ್ಧಿತ ಪ್ರತ್ಯಯ ಸ್ತ್ರೀಲಿಂಗ ರೂಪ
ಬೀಗ ಇತಿ ಬೀಗತಿ
ಬ್ರಾಹ್ಮಣ ಬ್ರಾಹ್ಮಣಿತಿ
ಒಕ್ಕಲಿಗ ಇತ್ತಿ ಒಕ್ಕಲಗಿತ್ತಿ
ಹೂವಾಡಿಗ ಹೂವಾಡಗಿತ್ತಿ
ಅಗಸ ಗಿತ್ತಿ ಅಗಸಗಿತ್ತಿ
ಅರಸ ಇ ಅರಸಿ
ಅಣುಗ (ಮಗ, ಪ್ರೀತಿ ಪಾತ್ರ) ಅಣುಗಿ (ಮಗಳು)
ಗೊಲ್ಲ ತಿ ಗೊಲ್ಲತಿ
ಒಡೆಯ ಒಡತಿ
ಕನ್ನಡಿಗ ಕನ್ನಡತಿ
ಜಾಣ ಎ ಜಾಣೆ
ಕಳ್ಳ ಕಳ್ಳೆ
ಹಣವಂತ ಹಣವಂತೆ
ಮೋಸಗಾರ ಆರ್ತಿ ಮೋಸಗಾರ್ತಿ
ಮಾತುಗಾರ ಮಾತುಗಾರ್ತಿ
ಬೇಟೆಗಾರ ಬೇಟೆಗಾರ್ತಿ
(2) ತದ್ಧಿತಾಂತ ಭಾವನಾಮಗಳು:
ಷಷ್ಠೀವಿಭಕ್ತಿಯೊಂದಿಗೆ ಕೊನೆಯಾಗುವ ನಾಮ ಪ್ರಕೃತಿಗಳ ಮುಂದೆ ಭಾವಾರ್ಥದಲ್ಲಿ ~ತನ, ~ಇಕೆ, ~ಉ, ~ಪು, ~ಮೆ, ಮೊದಲಾದ ತದ್ಧಿತ ಪ್ರತ್ಯಯಗಳು ಸೇರಿ ಆಗುವ ಪದಗಳನ್ನು ‘ತದ್ಧಿತಾಂತ ಭಾವನಾಮ’ ಎನ್ನುವರು.
ಪ್ರತ್ಯಯ ನಾಮಪದ ಭಾವಾರ್ಥದಲ್ಲಿ ಪ್ರತ್ಯಯ ತದ್ಧಿತಾಂತ ಭಾವನಾಮ
ತನ ದೊಡ್ಡವನ (ಭಾವ) – ತನ ದೊಡ್ಡತನ ಇದೆ ರೀತಿ ಜಾಣತನ, ಚಿಕ್ಕತನ, ಹಿರಿತನ, ಕಿರಿತನ, ಕೆಟ್ಟತನ
ಇಕೆ ಬ್ರಾಹ್ಮಣನ (ಭಾವ) – ಇಕೆ ಬ್ರಾಹ್ಮಣಿಕೆ ಇದೆ ರೀತಿ ಚೆಲುವಿಕೆ
ಉ ಕಿವುಡನ (ಭಾವ) – ಉ ಕಿವುಡು ಇದೆ ರೀತಿ ಕುಳ್ಳು, ಕುರುಡು, ಕುಂಟು, ತೊದಲು,
ಪು ಬಿಳಿದರ (ಭಾವ) – ಪು ಬಿಳುಪು, ಕಪ್ಪು, ಇಂಪು, ತಂಪು, ಕಂಪು, ಕೆಂಪು, ನುಣುಪು, ಹೊಳಪು
ಮೆ ಜಾಣನ (ಭಾವ) – ಮೆ ಜಾಣ್ಮೆ ಇದೆ ರೀತಿ ಹಿರಿಮೆ, ಕಿರಿಮೆ
ಪಿರಿದರ (ಭಾವ) – ಪೆರ್ಮೆ (ಹಿರಿಮೆ, ಗರ್ವ)
(3) ತದ್ಧಿತಾಂತ ಅವ್ಯಯಗಳು:
ನಾಮ ಪ್ರಕೃತಿಗಳಿಗೆ ~ಅಂತೆ, ~ವೊಲ್, ~ವೊಲು, ~ವೋಲ್, ~ವೋಲು, ~ತನಕ, ~ವರೆಗೆ, ~ಮಟ್ಟಿಗೆ, ~ಓಸ್ಕರ, ~ಇಂತ, ~ಆಗಿ, ~ಓಸುಗ, ಮೊದಲಾದ ತದ್ಧಿತ ಪ್ರತ್ಯಯಗಳು ಸೇರಿ ಆಗುವ ಶಬ್ದಗಳನ್ನು ‘ತದ್ಧಿತಾಂತ ಅವ್ಯಯಗಳು’ ಎನ್ನುವರು.
ಅಂತೆ ಶಿವನಂತೆ, ಸೂರ್ಯನಂತೆ, ಅವನಂತೆ, ಇವನಂತೆ, ಸೀತೆಯಂತೆ
ವೊಲ್ ಶಿವನವೊಲ್, ಸೂರ್ಯನವೊಲ್
ತನಕ ಮನೆತನಕ, ಅಲ್ಲಿತನಕ, ಕಡೆತನಕ, ದಾರಿತನಕ,
ವರೆಗೆ ಮನೆವರೆಗೆ, ಕೊನೆವರೆಗೆ, ಅಲ್ಲಿವರೆಗೆ, ಶಾಲೆವರೆಗೆ
ಮಟ್ಟಿಗೆ ನನ್ನಮಟ್ಟಿಗೆ, ಅವರಮಟ್ಟಿಗೆ, ಇವರಮಟ್ಟಿಗೆ
ಓಸ್ಕರ ನನಗೋಸ್ಕರ, ನೀನಗೋಸ್ಕರ, ನಾಯಿಗೋಸ್ಕರ
ಇಂತ ಇವರಿಗಿಂತ, ಅವರಿಗಿಂತ, ಅವಳಿಗಿಂತ, ಅದಕ್ಕಿಂತ
ಆಗಿ ನಿನಗಾಗಿ, ನನಗಾಗಿ, ಅವರಿಗಾಗಿ, ಎಲ್ಲರಿಗಾಗಿ
ಸಲುವಾಗಿ ನಿನ್ನ ಸಲುವಾಗಿ, ಮನೆಯ ಸಲುವಾಗಿ
ಅವ್ಯಯಗಳು
ಅವ್ಯವ ಅಂದರೇನು ?
ಅವ್ಯವ ಅಂದರೆ ರೂಪ ಭೇದವಿಲ್ಲದಂತಹ ಪದಗಳು. ಅಂದರೆ ಲಿಂಗ ವಚನ ವಿಭಕ್ತಿಗಳಿಂದ ಯಾವ ವ್ಯತ್ಯಾಸವನ್ನು ಹೊಂದದೆ ಒಂದೇ ರೂಪದಲ್ಲಿರುವ ಶಬ್ದಗಳನ್ನು ಆವ್ಯವ ಎಂದು ಕರೆಯುತ್ತೇವೆ. ಉದಾಹರಣೆಗೆ ಚೆನ್ನಾಗಿ, ಮೆಲ್ಲಗೆ, ಮತ್ತು ಹಾಗೆ ಅದರ, ಬಳಿಕ, ಹಹಹ, ಸುಮ್ಮನೆ, ನೆಟ್ಟಗೆ, ಒಡನೆ, ಹೊರಗೆ, ತರುವಾಯ ಇತ್ಯಾದಿ.
ಈ ಕೆಳಗೆ ಉದಾಹರಣೆಗಳೊಂದಿಗೆ ವಿವರಿಸಲಾಗಿದೆ:
1. ಅವಳು ಸುಮ್ಮನೆ ಇದ್ದಳು
2. ಅವನು ಸುಮ್ಮನೆ ಇದ್ದನು
3. ಅವನು ಸುಮ್ಮನೆ ಇದ್ದರು
4. ಅದು ಸುಮ್ಮನೆ ಇತ್ತು
ಸುಮ್ಮನೆ ಎಂಬ ಪದವು ನಾಲ್ಕು ವಾಕ್ಯಗಳಲ್ಲಿ ಒಂದೇ ರೀತಿಯಾಗಿದೆ. ಸುಮ್ಮನೆ ಎಂಬ ಪದವು ಲಿಂಗ( ಅವನು ಅವಳು) ವಚನ, ವಿಭಕ್ತಿ ಪ್ರತ್ಯಯಗಳಿಂದ ಯಾವುದೇ ರೀತಿಯ ವ್ಯತ್ಯಾಸ ಹೊಂದದೆ ಏಕರೂಪದಲ್ಲಿದೆ. ಇದು ನಾಮಪದ ಹಾಗೂ ಕ್ರಿಯಾಪದದ ಹಾಗೆ ಲಿಂಗ, ವಚನ,ವಿಭಕ್ತಿಗಳಿಂದ ಬದಲಾವಣೆಯನ್ನು ಹೊಂದುವುದಿಲ್ಲ ಈ ರೀತಿಯ ಪದವನ್ನು ಅವ್ಯವ ಎನ್ನುತ್ತಾರೆ.
ನಾಮಪದ ಕ್ರಿಯಾಪದಗಳಂತೆ ಲಿಂಗ, ವಚನ, ವಿಭಕ್ತಿ ಪ್ರತ್ಯಯಗಳಿಂದ ರೂಪಭೇದವನ್ನು ಹೊಂದದೆ ಏಕರೂಪವಾಗಿರುವ ಪದಗಳನ್ನು ಆವ್ಯವ ಎಂದು ಕರೆಯಲಾಗಿದೆ
ಹೀಗೆ ಲಿಂಗ ವಚನ ವಿಭಕ್ತಿಗಳಿಂದ ಯಾವ ವ್ಯತ್ಯಾಸವನ್ನು ಹೊಂದದ ಅನೇಕ ಶಬ್ದಗಳನ್ನು ಭಾಷೆಯಲ್ಲಿ ಬಳಸುತ್ತೇವೆ ಸುಮ್ಮನೆ, ನೆಟ್ಟಗೆ, ಮೆಲ್ಲಗೆ, ಸುತ್ತಲೂ, ತರುವಾಯ, ಇಲ್ಲ – ಇಂಥವೆಲ್ಲ ಇದೇ ವರ್ಗಕ್ಕೆ ಸೇರಿದವುಗಳು ಇಂತಹ ಅವ್ಯಯಗಳ ಬಗೆ ಬಗೆಯ ರೂಪದಲ್ಲಿ ಬಳಕೆಯಲ್ಲಿದ್ದು ಅವುಗಳನ್ನು ಹೀಗೆ ಗುರುತಿಸಬಹುದು:
ಅವ್ಯಯದ 10 ವಿಧಗಳು
1) ಸಾಮಾನ್ಯಾವ್ಯಯಗಳು
2) ಅನುಕರಣಾವ್ಯಯಗಳು
3) ಭಾವಸೂಚಕಾವ್ಯಯಗಳು (ನಿಪಾತಾವ್ಯಯಗಳು)
4) ಕ್ರಿಯಾರ್ಥಕಾವ್ಯಯಗಳು
5) ಸಂಬಂಧಾರ್ಥಕಾವ್ಯಯಗಳು
6) ಕೃದಂತಾವ್ಯಯ
7) ತದ್ಧಿತಾಂತವ್ಯಯ
8) ಅವಧಾರಣಾರ್ಥಕಾವ್ಯಯ
9) ಸಂಬೋಧಕಾವ್ಯಯ
10) ಪ್ರಶ್ನಾರ್ಥಕಾವ್ಯಯ
1) ಸಾಮಾನ್ಯಾವ್ಯಯಗಳು:-
ಯಾವುದಾದರೊಂದು ಕ್ರಿಯೆ ನಡೆದ ಸ್ಥಳ, ಕಾಲ ಅಥವಾ ರೀತಿಯನ್ನು ಹೇಳು ವಂಥಹ ಪದಗಳೆ ಸಾಮಾನ್ಯಾವ್ಯಯಗಳು. ಇವು ಪ್ರಾಯಶಃ ಕ್ರಿಯೆಗೆ ವಿಶೇಷಣಗಳಾಗಿರುತ್ತವೆ.
ಉದಾಹರಣೆಗೆ:
1. ಸ್ಥಳಕ್ಕೆ: ಅಲ್ಲಿ, ಇಲ್ಲಿ ಎಲ್ಲಿ, ಮೇಲು, ಕೆಳಗು, ಸುತ್ತಲು.
2. ಕಾಲಕ್ಕೆ: ಇಂದು, ಅಂದು, ಎಂದು, ಆಗ, ಈಗ, ನಿನ್ನೆ, ಬಳಿಕ, ಬೇಗ, ತರುವಾಯ, ಒಡನೆ, ಕೂಡಲೆ, ಇನ್ನು.
3. ರೀತಿಗೆ: ಮೆಲ್ಲಗೆ, ಕಮ್ಮಗೆ, ನೆಟ್ಟಗೆ, ತಟ್ಟನೆ, ಬಿಮ್ಮಗೆ, ಚೆನ್ನಾಗಿ, ಬಿಮ್ಮನೆ,ಉಮ್ಮನೆ, ಸೊಗಸಾಗಿ, ಸುಮ್ಮನೆ, ಸುಮ್ಮಗೆ, ಕಮ್ಮನೆ, ಬೇಗನೆ, ಮೆಲ್ಲನೆ, ಸಲೆ, ಕರಂ, ಬೇರೆ, ಹಾಗೆ, ಹೀಗೆ, ಅಂತು, ಇಂತು, ಇತ್ಯಾದಿಗಳು.
2) ಅನುಕರಣಾವ್ಯಯಗಳು :-
ಅರ್ಥವಿಲ್ಲದ ಧ್ವನಿವಿಶೇಷಣಗಳನ್ನು ತಾನು ಕೇಳಿದಂತೆ ಪುನಃ ಅನುಕರಣ ಮಾಡಿ ಹೇಳುವ ಶಬ್ದಗಳೆಲ್ಲ ಅನುಕರಣಾವ್ಯಯಗಳೆನಿಸುವುವು.
ಉದಾಹರಣೆಗೆ : ನೀರು ದಬದಬ ಬಿದ್ದಿತು. ಪಟಪಟ ಮಳೆ ಸುರಿಯಿತು.
ಇಲ್ಲಿ ‘ದಬದಬ ಪಟಪಟ’ ಇವು ಅನುಕರಣಾವ್ಯಯಗಳು. ಇದರಂತೆ ಚಟಚಟ, ಕರಕರ, ಚುರುಚುರು, ಸಿಮಿಸಿಮಿ, ಧಗಧಗ, ತಟತಟ, ರೊಯ್ಯನೆ, ಸುಯ್ಯನೆ, ಧಿಗಿಲನೆ, ಭೋರನೆ, ಘುಳುಘುಳು, ಗುಡುಗುಡು, ದಡದಡ-ಇತ್ಯಾದಿ.
3) ಭಾವಸೂಚಕಾವ್ಯಯಗಳು (ನಿಪಾತಾವ್ಯಯಗಳು) :-
ಮನಸ್ಸಿನಲ್ಲಿ ಉಂಟಾಗುವ ಕೋಪ, ಹರ್ಷ, ದುಃಖ, ಮೆಚ್ಚುಗೆ, ಆಕ್ಷೇಪ, ತಿರಸ್ಕಾರ-ಇತ್ಯಾದಿ ಭಾವಗಳನ್ನು ವ್ಯಕ್ತಪಡಿಸುವಾಗ ಕೆಲವು ಅರ್ಥವಿಲ್ಲದ ಶಬ್ದಗಳನ್ನು ಬಳಸುತ್ತೇವೆ. ಇವನ್ನು ಭಾವಸೂಚಕಾವ್ಯಯಗಳೆನ್ನುವರು.
ಇವಕ್ಕೆ ನಿಪಾತಾವ್ಯಯಗಳೆಂದೂ ಹೆಸರು.
ಉದಾಹರಣೆಗೆ:
ಎಲಾ! ಅಯ್ಯೋ! ಅಕ್ಕಟಾ! ಅಕಟಕಟಾ! ಆಹಾ! ಭಲೇ! ಭಲಾ! ಭಳಿರೇ! ಛೇ! ಥೂ! ಅಬ್ಬಾ! ಅಹಹಾ! ಆಹಾ! ಓಹೋ! ಹೋ! ಹೋಹೋ! ಅಃ! ಎಲೆಲಾ! ಓ! ಏ! ಆಃ! ಹಹಹ! ಇತ್ಯಾದಿ.
4) ಕ್ರಿಯಾರ್ಥಕಾವ್ಯಯಗಳು :-
ಕ್ರಿಯಾಪದದ ಸ್ಥಾನದಲ್ಲಿ ನಿಂತು ವಾಕ್ಯದ ಅರ್ಥವನ್ನು ಪೂರ್ಣಗೊಳಿಸುವ ಕೆಲವು ಅವ್ಯಯಗಳು ಕ್ರಿಯಾರ್ಥಕಾವ್ಯಯಗಳೆನಿಸುವವು.
ಉದಾಹರಣೆಗೆ: ಉಂಟು, ಬೇಕು, ಬೇಡ, ಅಲ್ಲ, ಅಹುದು, ಹೌದು, ಸಾಕು, ಇಲ್ಲ-ಇತ್ಯಾದಿಗಳು.
5) ಸಂಬಂಧಾರ್ಥಕಾವ್ಯಯಗಳು :-
ಎರಡು ಪದಗಳನ್ನಾಗಲಿ, ಅಥವಾ ಹಲವು ಪದ ಸಮುಚ್ಚಯಗಳನ್ನಾಗಲಿ, ವಾಕ್ಯಗಳನ್ನಾಗಲಿ, ಜೋಡಿಸುವಂಥ ಮತ್ತು ಸಂಬಂಧಗೊಳಿಸುವಂಥ ಶಬ್ದಗಳು ಸಂಬಂಧಾರ್ಥಕಾವ್ಯಯಗಳು.
ಉದಾಹರಣೆಗೆ: ಊ, ಉಂ, ಮತ್ತು, ಅಥವಾ, ಆದ್ದರಿಂದ, ಆದುದರಿಂದ, ಅಲ್ಲದೆ.
(i) ಪದಗಳನ್ನು ಜೋಡಿಸುವಿಕೆ:-
(೧) ರಾಮನೂ (ಊ), ಭೀಮನೂ (ಊ), ಸೀತೆಯೂ (ಊ) ಬಂದರು.
(೨) ರಾಮನುಂ (ಉಂ), ಭೀಮನುಂ (ಉಂ), ಸೀತೆಯುಂ (ಉಂ) ಬಂದರ್.
ನೀನು ಮತ್ತು ನಾನು ಇಬ್ಬರೂ ಹೋಗೋಣ.
ಮೇಲಿನ ವಾಕ್ಯಗಳಲ್ಲಿ ರಾಮ ಭೀಮ ಸೀತೆಯರನ್ನು ಮಧ್ಯದಲ್ಲಿರುವ ಊ ಎಂಬ ಸಂಬಂಧಾರ್ಥಕಾವ್ಯಯವೂ ಮತ್ತು ಉಂ ಎಂಬ ಸಂಬಂಧಾರ್ಥಕಾವ್ಯಯವೂ ಜೋಡಿಸಿವೆ (ಸಂಬಂಧಗೊಳಿಸಿವೆ).
(ii) ಎರಡು ಪದಗಳನ್ನು ಜೋಡಿಸುವಿಕೆ:-
ಅವನು ಬರುವುದೂ (ಊ) ಬೇಡ; ಆ ಕೆಲಸವಾಗುವುದೂ (ಊ) ಬೇಡ.
ಮೇಲಿನ ಉದಾಹರಣೆಯಲ್ಲಿ ಬರುವುದು+ಊ, ಆಗುವುದು+ಊ ಎಂಬಲ್ಲಿ ಊ ಬಂದಿರುವುದರಿಂದ ಎರಡೆರಡು ಪದಗಳನ್ನು ಜೋಡಿಸುವ ಈ ಊ ಕಾರವು ಪದಸಮುಚ್ಚಯವನ್ನು ಜೋಡಿಸಿದಂತಾಯಿತು.
(iii) ಅವನು ಮತ್ತು ನೀನು ಇಬ್ಬರೂ ಹೋಗಿರಿ:
ಇಲ್ಲಿ ‘ಮತ್ತು’ ಎಂಬುದು ಅವನು, ನೀನು ಎಂಬೆರಡು ಪದಗಳನ್ನು ಸಂಬಂಧಗೊಳಿಸಿವೆ.
(iv) ತಂದೆತಾಯಿಗಳ ಸೇವೆ ಮಾಡಬೇಕು ಮತ್ತು ಅವರ ಆಜ್ಞೆಯನ್ನು ಪಾಲಿಸಬೇಕು.
ಇಲ್ಲಿ ‘ಮತ್ತು’ ಎಂಬುದು ಎರಡು ವಾಕ್ಯಗಳನ್ನು ಸಂಬಂಧಗೊಳಿಸಿದೆ. ಇವುಗಳ ಹಾಗೆಯೆ ಉಳಿದ ಸಂಬಂಧಾರ್ಥಕಾವ್ಯಯಗಳ ಬಗೆಗೆ ಕೆಳಗಿನ ಉದಾಹರಣೆಗಳನ್ನು ನೋಡಿರಿ.
ಆದ್ದರಿಂದ-
ಅವನು ಬರಲಿಲ್ಲ ಆದ್ದರಿಂದ ನಾನು ಬರಲಿಲ್ಲ.
ಆದರೆ-
ಮಳೆಬಂದಿತು ಆದರೆ ಕೆರೆ ತುಂಬಲಿಲ್ಲ.
ಆದುದರಿಂದ-
ಅವನು ಬರಲಿಲ್ಲ ಆದುದರಿಂದ ಕೊಡಲಿಲ್ಲ.
ಇನ್ನೂ-
ಹತ್ತು ಮೂಟೆ ಬಂತು, ಇನ್ನೂ ಐದು ಮೂಟೆ ಬರಬೇಕು.
ಹಾಗಾದರೆ-ನೀನು ಬರಬೇಕೆ? ಹಾಗಾದರೆ ಬೇಗ ಬಾ.
ಅಥವಾ-ಒಂದು ಮೂಟೆ ಅಕ್ಕಿ ಕೊಡು, ಅಥವಾ ನೂರಐವತ್ತು ರೂಪಾಯಿಕೊಡು.
ಆಗ-ನೀನು ಇಲ್ಲಿಗೆ ಬಾ, ಆಗ ಎಲ್ಲವೂ ಸರಿ ಹೋಗುತ್ತದೆ.
ಮೇಲಿನ ವಾಕ್ಯಗಳಲ್ಲಿ ಕೆಳಗೆ ಗೆರೆ ಎಳೆದ ಅವ್ಯಯಗಳು ಎರಡು ವಾಕ್ಯಗಳನ್ನು ಸಂಬಂಧಗೊಳಿಸಿದ ಸಂಬಂಧಾರ್ಥಕಾವ್ಯಯಗಳೆಂದು ತಿಳಿಯಬೇಕು.
6) ಕೃದಂತಾವ್ಯಯ:- 7) ತದ್ಧಿತಾಂತವ್ಯಯ :-
ಈ ಎರಡೂ ಜಾತಿಯ ಅವ್ಯಯ ಪ್ರಭೇದಗಳನ್ನು ಕೃದಂತ ತದ್ಧಿತಾಂತ ಪ್ರಕರಣಗಳಲ್ಲಿ ವಿಶದವಾಗಿ ತಿಳಿದಿದ್ದೀರಿ. ಆ ಪ್ರಕರಣವನ್ನು ಪುನಃ ನೋಡಿ ಇವುಗಳ ವಿಷಯವಾಗಿ ಜ್ಞಾಪಿಸಿಕೊಳ್ಳಿರಿ.
8) ಅವಧಾರಣಾರ್ಥಕಾವ್ಯಯ :-
ಒಂದು ನಿಶ್ಚಯಾರ್ಥದಲ್ಲಿ ಬರುವ ಅವ್ಯಯವೇ ಅವಧಾರಣಾರ್ಥಕಾವ್ಯಯ. ಹಲವು ವಸ್ತುಗಳಲ್ಲಿ ಒಂದನ್ನು ನಿಶ್ಚಯಿಸುವುದೇ ಅವಧಾರಣೆಯೆನಿಸುವುದು.
ಉದಾಹರಣೆಗೆ:
(i) ಅದೇ ನನ್ನ ಪುಸ್ತಕ.
ಈ ವಾಕ್ಯದಲ್ಲಿ (ಅದು+ಏ) ದಕಾರದ ಮುಂದಿರುವ ‘ಏ’ ಕಾರವೇ ಅವಧಾರಣಾರ್ಥಕಾವ್ಯಯವೆನಿಸುವುದು. ಇದರಂತೆ-
(ii) ನಾನೇ ಅದನ್ನು ಬರೆದೆನು.
ಇಲ್ಲಿ (ನಾನು+ಏ) ನಾನೇ ಎಂದು ಬರವಣಿಗೆಯನ್ನು ಮಾಡಿದ ವಿಷಯದಲ್ಲಿ ನಿಶ್ಚಯಿಸಿ ಹೇಳುವುದರಿಂದ ‘ಏ’ ಎಂಬುದು ಅವಧಾರಣಾರ್ಥಕಾವ್ಯಯವೆನಿಸಿತು.
9) ಸಂಬೋಧಕಾವ್ಯಯ :
ಕರೆಯುವಾಗ / ಸಂಬೋಧಿಸುವಾಗ ಉಪಯೋಗಿಸುವ ಶಬ್ದಗಳನ್ನು ಸಂಬೋಧಕಾವ್ಯಯ ಗಳು ಎಂದು ಕರೆಯುತ್ತಾರೆ. ಎಲಾ, ಎಲೋ, ಎಲೇ, ಎಲೌ, ಓ ಇತ್ಯಾದಿ
10) ಪ್ರಶ್ನಾರ್ಥಕಾವ್ಯಯ :
ಪ್ರಶ್ನೆಮಾಡುವಾಗ ಉಪಯೋಗಿಸುವ ಅವ್ಯಯಗಳನ್ನು ಪ್ರಶ್ನಾರ್ಥಕಾವ್ಯಯ ಗಳು ಎನ್ನುತ್ತಾರೆ. ಎ, ಏ, ಓ, ಆ, ಏನು ಎಂಬ ಪ್ರತ್ಯಯಗಳು ಪ್ರಶ್ನಾರ್ಥವನ್ನು ಸೂಚಿಸುತ್ತವೆ.
ಅವರು ಹೋದರೇ?
ನೀನು ಬಂದೆಯಾ?
ಅವರು ನಿನ್ನ ಮಾವನವರೇ?
ಅವಳು ನಿನ್ನ ಸಂಗಾತಿಯೇ?
Go to Tulu News Page to read more about Tulu Nadu News, Events etc.
Go to Our Partner Website to book Self Drive Cars to drive in Mangalore, Udupi and Kasargod